ದಾವಣಗೆರೆ, ಆ.29- ರಾಷ್ಟ್ರವ್ಯಾಪಿ ಮಹಿಳೆಯರ ಪ್ರತಿಭಟನಾ ದಿನದ ಅಂಗವಾಗಿ ಮಹಿಳೆಯರ ಜೀವ, ಜೀವನೋಪಾಯ, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಂರಕ್ಷಿಸಲು ಆಗ್ರಹಿಸಿ ನಗರದಲ್ಲಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ ಎಸ್) ನೇತೃತ್ವದಲ್ಲಿ ನಿನ್ನೆ ಪ್ರತಿಭಟನೆ ನಡೆಸಲಾಯಿತು.
ಉಪ ವಿಭಾಗಾಧಿಕಾರಿ ಕಚೇರಿ ಬಳಿ ಜಮಾಯಿಸಿದ್ದ ಸಂಘಟನೆ ಕಾರ್ಯಕರ್ತರು, ಉಪ ವಿಭಾಗಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮಹಿಳೆಯರ ಮೇಲಿನ ಎಲ್ಲಾ ರೀತಿಯ ಅಪರಾಧಗಳನ್ನು ತಡೆಗಟ್ಟಿ ಹಾಗೂ ತಪ್ಪಿತಸ್ಥರಿಗೆ ನಿದರ್ಶನೀಯ ಶಿಕ್ಷೆಯನ್ನು ಖಾತ್ರಿಪಡಿಸಬೇಕು. ಕೋವಿಡ್ ಪೀಡಿತರಿಗೆ ಹಾಗೂ ಇತರರಿಗೆ ಸೂಕ್ತ ಆರೋಗ್ಯ ಸೌಕರ್ಯಗಳನ್ನು ತುರ್ತಾಗಿ ಖಚಿತಪಡಿಸಬೇಕು. ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಉದ್ಯೋಗವನ್ನು ಖಚಿತಪಡಿಸಬೇಕು. ಅವಶ್ಯಕವಿರುವ ಎಲ್ಲಾ ಮಹಿಳೆಯರಿಗೆ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಐಎಂಎಸ್ ಎಸ್ ನ ಜಿಲ್ಲಾ ಕಾರ್ಯದರ್ಶಿ ಕೆ. ಭಾರತಿ, ಪುಷ್ಪ, ಕಾವ್ಯ, ಸ್ವಪ್ನ ಸೇರಿದಂತೆ ಇತರರು ಭಾಗವಹಿಸಿದ್ದರು.