ದಾವಣಗೆರೆ, ಆ.19- ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ತೆರವುಗೊಳಿಸಿದ್ದ ಬೆಳಗಾವಿ ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಜಿಲ್ಲಾ ಘಟಕದಿಂದ ನಗರದಲ್ಲಿ ಇಂದು ಜಯದೇವ ವೃತ್ತದಲ್ಲಿ ಪ್ರತಿಭಟನೆ ಮಾಡಿ, ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಹಾಗೂ ಬೆಳಗಾವಿ ಜಿಲ್ಲಾಡಳಿತವು ಎಚ್ಚೆತ್ತುಕೊಂಡು, ಅದಷ್ಟು ಬೇಗನೇ ತೆರವುಗೊಳಿಸಿರುವ ಸ್ಥಳದಲ್ಲಿಯೇ ಪುತ್ಥಳಿಯನ್ನು ಮರು ಸ್ಥಾಪಿಸಲು ಆಗ್ರಹಿಸಲಾಯಿತು ಹಾಗೂ ಈ ಕಾರ್ಯ ವಿಳಂಬವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಲಾಯಿತು.
ಈ ಪ್ರತಿಭಟನೆಯಲ್ಲಿ ವಸುಂಧರ, ನಾಗರಾಜ ಗೌಡ, ಶ್ರೇಯಸ್ ಎಸ್. ರಾಮಣ್ಣ ತೆಲಗಿ, ನಾಗರಾಜ ಆದಾಪುರ, ಗಿರೀಶ್, ರವಿನಾಯ್ಕ, ಶಿವಕುಮಾರ್, ಸೈಯದ್ ನಜೀರ್, ಸಂತೋಷ್ ಕುಮಾರ್ ಅಂಗಡಿ, ದಯಾನಂದ್ ಬಿ.ಜಿ., ವಿನಾಯಕ್, ಶಿವಣ್ಣ, ನಿಂಗರಾಜು, ಅಮರ್ ಮತ್ತಿತರರು ಹಾಜರಿದ್ದರು.