ಹರಿಹರ, ಆ. 14 – ಹರಿಹರದ ಎಮ್. ಕೆ. ಇ. ಟಿ. ಲಕ್ಷ್ಮಣರಾವ್ ಕಿರ್ಲೋಸ್ಕರ್ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿ ಚಿ. ಎ. ಅಭಿಷೇಕ್ ಅವರು ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣನಾಗಿದ್ದಾನೆ. ಈ ನಿಮಿತ್ತ ಹರಿಹರದ ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಸ್ಟಡೀಸ್ ನಿರ್ದೇಶಕ ಡಾ|| ಬಿಪ್ಲಬ್‍ಕುಮಾರ್ ಬಿಸ್ವಾಲ್ ಅವರು ಇಂದು ನಡೆದ ಸರಳ ಸಮಾರಂಭದಲ್ಲಿ ಅಭಿಷೇಕ್‍ನನ್ನು ಸನ್ಮಾನಿಸಿದರು.
ಈ ಸಮಾರಂಭದಲ್ಲಿ ಮೈಸೂರ್ ಕಿರ್ಲೋಸ್ಕರ್ ಎಜುಕೇಷನ್ ಟ್ರಸ್ಟ್‌ನ ರಿಜಿಸ್ಟ್ರಾರ್ ಪ್ರೊ|| ಬಿ.ಟಿ. ಅಚ್ಯುತ್, ಪ್ರಾಂಶುಪಾಲ ಹೆಗಡೆ, ಎಮ್.ಕೆ.ಇ.ಟಿ. ಯ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕೆಐಎಎಂಎಸ್‌ನ ಅಧ್ಯಾಪಕ ವರ್ಗದವರು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅಭಿಷೇಕ್, ತನ್ನ ಸಾಧನೆಗೆ ಪ್ರೋತ್ಸಾಹಿಸಿದ ಎಲ್ಲಾ ಶಿಕ್ಷಕರಿಗೆ ವಂದಿಸಿ ಮುಂಬರುವ ದಿನಗಳಲ್ಲಿ ದೇಶದ ಪ್ರತಿಷ್ಠಿತ ತಾಂತ್ರಿಕ ವಿದ್ಯಾಸಂಸ್ಥೆ ಐ.ಐ.ಟಿ ಯಲ್ಲಿ ಇಂಜಿನಿಯ ರಿಂಗ್ ವ್ಯಾಸಂಗ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದನು.