ದಾವಣಗೆರೆ, ಆ.12- ರಾಷ್ಟ್ರೀಯ ಹಬ್ಬಗಳ ಧ್ವಜಾರೋಹಣ ಕುರಿತಂತೆ ಹೊರಡಿಸಿರುವ ಸುತ್ತೋಲೆಯು ಎಸ್ಡಿಎಂಸಿ ಬೈಲಾ ಪ್ರಕಾರ ಅಸಂವಿಧಾನಿಕವಾಗಿದ್ದು, ಸುತ್ತೋಲೆಯನ್ನು ರದ್ದುಗೊಳಿಸುವಂತೆ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ.
ಆಗಸ್ಟ್ 15 ಹಾಗೂ ಜನವರಿ 26 ರಂದು ಧ್ವಜಾರೋಹಣ ಕಾರ್ಯಕ್ರಮವನ್ನು ಆಯಾ ಸರ್ಕಾರಿ ಶಾಲೆಗಳ ಚುನಾಯಿತ ಶಾಲಾಭಿವೃದ್ಧಿ ಮತ್ತು ಮೇಲುಸ್ತು ವಾರಿ ಸಮಿತಿಯ ಅಧ್ಯಕ್ಷರುಗಳ ಅಧ್ಯಕ್ಷತೆಯಲ್ಲಿ ಅಧ್ಯಕ್ಷರು ಧ್ವಜಾರೋಹಣ ನಡೆಸುವುದು ಪ್ರತೀತಿ. ಆದರೆ ಈ ಬಾರಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಹೊರತುಪಡಿಸಿ ಶಾಲೆಯ ಮುಖ್ಯಶಿಕ್ಷಕರು ಮತ್ತು ಶಿಕ್ಷಕರ ಸಮ್ಮುಖದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲು ಸುತ್ತೋಲೆ ಹೊರಡಿಸಿರುವುದು ಎಸ್ಡಿಎಂಸಿ ಬೈಲಾ ಪ್ರಕಾರ ಅಸಂವಿಧಾನಿಕವಾಗಿದೆ ಎಂದಿದ್ದಾರೆ.
ಸುತ್ತೋಲೆಯನ್ನು ಪರಿಶೀಲಿಸಿ, ಎಸ್ಡಿಎಂಸಿ ಅಧ್ಯಕ್ಷರ ಹಾಗೂ ಸದಸ್ಯರುಗಳ ಉಸ್ತುವಾರಿಯಲ್ಲಿ ಅಧ್ಯಕ್ಷರುಗಳು ಧ್ವಜಾರೋಹಣ ನೆರವೇರಿಸಲು ತತ್ತಕ್ಷಣವೇ ಸುತ್ತೋಲೆ ಹೊರಡಿಸುವಂತೆ ಸಚಿವರಿಗೆ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮೂಲಕ ಮನವಿ ನೀಡಲಾಗಿದೆ ಎಂದು ವೇದಿಕೆ ಅಧ್ಯಕ್ಷ ಶಿವಕ್ಕಳ ಆಂಜನೇಯ ಹಾಗೂ ಪ್ರಧಾನ ಕಾರ್ಯದರ್ಶಿ ನಿಂಗರಾಜು ಹಾವನೂರು ತಿಳಿಸಿದ್ದಾರೆ.