ಮಲೇಬೆನ್ನೂರು, ಡಿ.26 – ಸಮೀಪದ ಗುಡ್ಡದ ಬೇವಿನಹಳ್ಳಿ ಗ್ರಾಮದಲ್ಲಿ ಹಳ್ಳಿ ಸೊಬಗು ಯುವಕರ ತಂಡದಿಂದ ರೈತ ದಿನಾಚರಣೆ ಮಾಡಲಾಯಿತು.ತಂಡದ ಅಧ್ಯಕ್ಷ ತಿಮ್ಮಪ್ಪ ಮಾತನಾಡಿ, ರೈತರು ಯಾವ ಸಮಸ್ಯೆಗಳು ಬಂದರೂ ಎದೆಗುಂದದೇ ಎದುರಿಸಿ ಜೀವನ ನಡೆಸಬೇಕು. ರೈತ ಜೀವನದಲ್ಲಿ ಸುಖ ಕಾಣಬೇಕು ಎಂದರು.
ತಂಡದ ಉಪಾಧ್ಯಕ್ಷ ನಾಗರಾಜ್ ಕೆಂಗಣ್ಣರ ಮಾತನಾಡಿ, ಹಗಲಿರುಳ ಶ್ರಮದಿಂದ ರೈತರು ಇಡೀ ಜಗಕೆ ಆಹಾರ ನೀಡುತ್ತಾರೆ, ಅಂತಹ ಪುಣ್ಯದ ಕಾರ್ಯವನ್ನು ಮಾಡುವ ರೈತರಿಗೆ ಇಡೀ ಜನತೆ ಋಣಿಯಾಗಿರಬೇಕು. ಧನ್ಯತಾ ಭಾವ ವ್ಯಕ್ತಪಡಿಸಬೇಕು. ರೈತನನ್ನು ಎರಡನೇ ಯೋಧನಂತೆ ಬಿಂಬಿಸಬೇಕು ಎಂದು ಕರೆ ನೀಡಿದರು.
ಯುವಕ ಓಂಪ್ರಕಾಶ್ ಮಾತನಾಡಿ, ರೈತನೊಬ್ಬ ವಿಶ್ವದಲ್ಲಿರದಿದ್ದರೆ ಇಡೀ ಜೀವ ಸಂಕುಲ ನಾಶವಾಗುತ್ತಿತ್ತು. ರೈತರಿಂದಲೇ ದೇಶದ ಬದುಕು, ರೈತ ಮತ್ತು ಯೋಧ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಸಿದರು.
ಮುಖಂಡರಾದ ತಿಮ್ಮಣ್ಣ ಮೂಗಿನಗೊಂದಿ, ಸಹದೇವಪ್ಪ, ಕಾರ್ತಿಕ್, ರಾಕೇಶ್ ಪಟೇಲ್, ರವಿಕಿರಣ್ ಮತ್ತಿತರರು ಭಾಗಿಯಾಗಿ ರೈತ ದಿನದ ಸ್ಮರಣೆಗಾಗಿ ನೆರೆದಿರುವ ರೈತರಿಗೆ ತೆಂಗಿನ ಸಸಿ ವಿತರಿಸಲಾಯಿತು.