ದಾವಣಗೆರೆ,ಡಿ.23- ಪ್ರಗತಿಯ ಪಥದಲ್ಲಿರುವ ನಗರದ ಕೆಲವೇ ಪತ್ತಿನ ಸಹಕಾರ ಸಂಘಗಳಲ್ಲಿ ದಾವಣಗೆರೆ ಶ್ರೀ ದಾನೇಶ್ವರಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಕೂಡಾ ಒಂದಾಗಿದೆ ಎಂದು ಹೋಟೆಲ್ ಉದ್ಯಮಿಯೂ ಆಗಿರುವ ಸಂಘದ ಅಧ್ಯಕ್ಷ ಕೆ.ಎಂ. ರವಿಶಂಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಘದ ಕಚೇರಿಯಲ್ಲಿ ಮೊನ್ನೆ ಏರ್ಪಾಡಾಗಿದ್ದ ಸಂಘದ 6ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಮ್ಮ ಸಂಸ್ಥೆಯು ಅಲ್ಪ ಅವಧಿಯಲ್ಲೇ ಪ್ರಗತಿಯ ಮುಂಚೂಣಿಯಲ್ಲಿದ್ದು, ಸಂಘದ ಸದಸ್ಯರಿಗೆ ಶೇ. 6 ರಂತೆ ಭಾಜ್ಯಾಂಶ ನೀಡಲು ಸಂಘದ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ ಎಂದು ರವಿಶಂಕರ್ ಅವರು ಸಂಘದ ಸದಸ್ಯರ ಚಪ್ಪಾಳೆಗಳ ಮಧ್ಯೆ ಘೋಷಿಸಿದರು.
ಸಂಘದ ಸದಸ್ಯರ – ಗ್ರಾಹಕರ ಪ್ರೀತಿ – ವಿಶ್ವಾಸ – ನಂಬಿಕೆ, ಸಿಬ್ಬಂದಿ ವರ್ಗದವರ ಶ್ರಮ ಹಾಗೂ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರ ಇಚ್ಛಾಶಕ್ತಿಯಿಂದಾಗಿ ಶ್ರೀ ದಾನೇಶ್ವರಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಪ್ರಗತಿಯಲ್ಲಿದೆ ಎಂದು ತಿಳಿಸಿ, ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು ಗಳಾದ ಹಿರಿಯ ವಕೀಲ ಡಿ.ಎಸ್. ಜಯರಾಜ್, ಬೇತೂರು ರಾಜೇಶ್, ಡಿ.ಎಸ್. ವಿಜಯಕುಮಾರ್, ಶ್ರೀಮತಿ ಎಸ್.ಜೆ. ನಯನ ಮತ್ತಿತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಶ್ರೀಮತಿ ಸುಕನ್ಯಾ ಬಿ. ಬೆಳ್ಳೂಡಿ ಅವರ ಪ್ರಾರ್ಥನೆಯ ನಂತರ ಉಪಾಧ್ಯಕ್ಷ ಬಿ. ಜಗದೀಶ್ ಸ್ವಾಗತಿಸಿದರು. ನಿರ್ದೇಶಕ ಆರ್. ಕರಿಬಸವರಾಜ್ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ವ್ಯವಸ್ಥಾಪಕ ಬಿ.ಹೆಚ್. ಈಶ್ವರಯ್ಯ ಅವರು ಲಾಭ ವಿಂಗಡಣೆ ಮತ್ತು ಅಂದಾಜು ಆಯ-ವ್ಯಯ ಕುರಿತಂತೆ ಮಾತನಾಡಿದರು. ನಿರ್ದೇಶಕ ಎಸ್.ಬಿ. ನಿಜಗುಣ ಶಿವಯೋಗಿ ವಂದಿಸಿದರು.