ಜನರ ಅನುಕೂಲದಂತೆ ರಸ್ತೆ ವಿನ್ಯಾಸ ಬದಲಿಸಲು ಶಾಸಕ ರಾಮಪ್ಪ ನಿರ್ದೇಶನ

ಮಲೇಬೆನ್ನೂರು, ಡಿ.25- ಪಟ್ಟಣದ ಆಶ್ರಯ ಕಾಲೋನಿ ಬಳಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಯ ವಿನ್ಯಾಸವನ್ನು ವಿವಿಧ ಜನಾಂಗದವರು ಸ್ಮಶಾನಕ್ಕೆ ಹೋಗಲು ಅನುಕೂಲವಾಗುವಂತೆ ಬದಲಿಸಿ ಎಂದು ಶಾಸಕ ಎಸ್‌. ರಾಮಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ತಿಮ್ಲಾಪುರದಿಂದ ಕೊಮಾರನಹಳ್ಳಿ-ಮಲೇಬೆನ್ನೂರು-ಜಿ.ಟಿ. ಕಟ್ಟಿ ಮಾರ್ಗವಾಗಿ ಕೊಕ್ಕನೂರು ರಸ್ತೆಗೆ ಸಂಪರ್ಕಿಸುವ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಇಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಸ್ತೆ ವಿನ್ಯಾಸ ಬದಲಿಸಿ ಎಂದು ಒತ್ತಾಯಿಸಿ, ನಾಗರಿಕರು ಕಾಮಗಾರಿಗೆ ತಡೆ ಒಡ್ಡಿದರು.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಸ್‌. ರಾಮಪ್ಪ ಅವರು, ರಸ್ತೆ ವಿನ್ಯಾಸ ಬದಲಿಸುವುದರಿಂದ 500 ಮೀಟರ್‌ ರಸ್ತೆ ಕಾಮಗಾರಿ ಹೆಚ್ಚಾಗುತ್ತದೆ. ಈ ಬಗ್ಗೆ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಎಂದು ಇಂಜಿನಿಯರ್‌ ಬಾಲಪ್ಪ ಅವರಿಗೆ ಹೇಳಿದರು.

ಒಮ್ಮೆ ಟೆಂಡರ್‌ ಆಗಿ ಕಾಮಗಾರಿ ಪ್ರಾರಂಭಿಸಿದಾಗ ವಿನ್ಯಾಸ ಬದಲಾವಣೆ ಕಷ್ಟ ಎಂದು ಇಂಜಿನಿಯರ್ ಬಾಲಪ್ಪ ಸ್ಪಷ್ಟಪಡಿಸಿದರು. 

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ಅಬೀದ್‌ ಅಲಿ, ಪುರಸಭೆ ಸದಸ್ಯ ಬಿ. ಸುರೇಶ್‌, ದಾದಾವಲಿ, ಪಾಳೇಗಾರ್‌ ನಾಗರಾಜ್, ಪಿ.ಆರ್‌. ಕುಮಾರ್‌, ಲೋಕೇಶ್‌, ಪಿ.ಹೆಚ್‌. ಶಿವು, ಪಿ.ಆರ್. ರಾಜು, ಬಿ. ಬಸಪ್ಪ, ಹನುಮಣ್ಣ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!