ಹರಿಹರ, ಡಿ.23- ತಾಲ್ಲೂಕಿನ ಗುತ್ತೂರು ಗ್ರಾಮವನ್ನು ಹರಿಹರ ನಗರಸಭೆಗೆ ಸೇರ್ಪಡೆ ಮಾಡುವುದನ್ನು ರದ್ದುಗೊಳಿಸಿ, ಗ್ರಾಮ ಪಂಚಾಯ್ತಿ ಚುನಾವಣೆ ನಡೆಸುವಂತೆ ಗುತ್ತೂರು ಗ್ರಾಮಸ್ಥರು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪನವರಿಗೆ ಇಂದು ಮನವಿ ಸಲ್ಲಿಸಿದರು.
ಈಗಾಗಲೇ 5 ವರ್ಷಗಳ ಅವಧಿಗೆ ನಗರಸಭೆಗೆ ಚುನಾವಣೆ ನಡೆದಿದೆ. ಗ್ರಾಮವನ್ನು ನಗರಸಭೆಗೆ ಸೇರಿಸಿಕೊಂಡರೆ, ಅಲ್ಲಿ ಗ್ರಾಮದ ಜನಪ್ರತಿನಿಧಿ ಇಲ್ಲವಾದಂತಾಗುತ್ತದೆ. ಇತ್ತ ನಗರಸಭೆಯಲ್ಲೂ ಇಲ್ಲಾ, ಅತ್ತ ಪಂಚಾಯ್ತಿಯಲ್ಲೂ ಜನಪ್ರತಿನಿಧಿ ಇಲ್ಲದಂತಾಗಿ ಗ್ರಾಮದ ಸಮಸ್ಯೆಗಳನ್ನು ಪರಿಹರಿಸಲು, ಧ್ವನಿ ಎತ್ತಲು ಆಗದೆ, ಗ್ರಾಮಸ್ಥರು ಸಾಮಾಜಿಕ ನ್ಯಾಯದಿಂದ ವಂಚಿತರಾಗಲಿದ್ದಾರೆ.
ಹಾಗಾಗಿ ಗುತ್ತೂರು ಗ್ರಾಮವನ್ನು ನಗರಸಭೆಗೆ ಸೇರಿಸುವ ಪ್ರಸ್ತಾವನೆ ಯಿಂದ ಕೈಬಿಟ್ಟು, ಗ್ರಾಮ ಪಂಚಾಯ್ತಿ ಚುನಾವಣೆ ನಡೆಸುವಂತೆ ಪ್ರಕಾಶ್ ಗೌಡ, ಪರಶುರಾಮಪ್ಪ, ರಾಮಪ್ಪ, ಲೋಕಪ್ಪ, ಬಸವರಾಜ್, ಖಲಂದರ್ ಉಲ್ಲಾಶಫಿ, ರಮೇಶ್ ಹಾಲಪ್ಪ, ಹನುಮಂತಪ್ಪ, ಪರಮೇಶ್ವರಪ್ಪ, ಆಂಜನಪ್ಪ, ರಾಮು, ಮೈಲಪ್ಪ, ಸಾವಿತ್ರ, ಹಾಲಮ್ಮ, ಹುಚ್ಚೆಂಗಮ್ಮ, ದೇವಕ್ಕ, ಎಸ್. ಅಂಬಿಕಾ ಇನ್ನಿತರರು ಮನವಿ ಮೂಲಕ ಆಗ್ರಹಿಸಿದ್ದಾರೆ.