ಚಂದ್ರಶೇಖರಪುರದಲ್ಲಿ ಗ್ರಾ.ಪಂ.ಸದಸ್ಯರ ಹರಾಜು!

ಕೂಡ್ಲಿಗಿ, ಡಿ.19 – ಕಳೆದ ವಾರ ಜಿಲ್ಲೆಯ ಸಿಂದಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೈಲೂರು ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರ ಹರಾಜು ಆಗಿರುವ ಸುದ್ದಿ ಮರೆಯುತ್ತಿರುವಾಗಲೇ ಈಗ ಕೂಡ್ಲಿಗಿ ತಾಲ್ಲೂಕಿನ ರಾಮದುರ್ಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಂದ್ರಶೇಖರಪುರ ಗ್ರಾಮದಲ್ಲಿ 6 ಗ್ರಾಮ ಪಂಚಾಯ್ತಿ ಸ್ಥಾನಗಳು ಗ್ರಾಮದ ಅಭಿವೃದ್ಧಿಯ ನೆಪದಲ್ಲಿ ಹರಾಜು ಆಗಿದ್ದು ಚುನಾವಣಾಧಿಕಾರಿಗಳು ಹರಾಜಿನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 

ಅಂದಾಜು ನಾಲ್ಕು  ಲಕ್ಷಕ್ಕೊಬ್ಬ ಗ್ರಾಮ ಪಂಚಾಯ್ತಿ ಸದಸ್ಯರನ್ನು ಹರಾಜಿನಲ್ಲಿ ಆಯ್ಕೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತಾಲ್ಲೂಕು ಚುನಾವಣಾಧಿಕಾರಿಗಳು ಹಾಗೂ ಎಂ.ಸಿ.ಸಿ. ತಂಡ ಗ್ರಾಮಕ್ಕೆ ಹೋಗಿ ಹರಾಜು ಪ್ರಕ್ರಿಯೆ ಮಾಡಿರುವುದರ ವಿರುದ್ಧ ಕ್ರಮ ಕೈಗೊಂಡಿದೆ.  

ಗ್ರಾಮ ಪಂಚಾಯ್ತಿ ಸದಸ್ಯರನ್ನು ಹರಾಜಿನಲ್ಲಿ ಕೂಗುವುದನ್ನು ರದ್ದುಪಡಿಸಿ ಹರಾಜಿನಲ್ಲಿ ಭಾಗವಹಿಸಿದ್ದ 10 ಜನ ಮುಖಂಡರ ಮೇಲೆ ಎಂ.ಸಿ.ಸಿ. ತಂಡದಿಂದ ತಾಲ್ಲೂಕಿನ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಚಂದ್ರಶೇಖರಪುರದಲ್ಲಿ ಈಗ ಚುನಾವಣೆ ನಡೆಯುತ್ತಿದೆ. ಯಾವ ಅಭ್ಯರ್ಥಿಗಳು ನಾಮಪತ್ರ ವಾಪಸ್ ತೆಗೆದುಕೊಂಡಿಲ್ಲ ಎಂದು ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ ತಿಳಿಸಿದ್ದಾರೆ.

ಸಿಂದಿಗೇರಿ ಗ್ರಾಮ ಪಂಚಾಯ್ತಿಯ ಬೈಲೂರು ಗ್ರಾಮದಲ್ಲಿ ಹರಾಜಿನಲ್ಲಿ ಆಯ್ಕೆಯಾಗಿದ್ದ 13 ಸದಸ್ಯರನ್ನು ಚುನಾವಣಾಧಿಕಾರಿಗಳು ಅಸಿಂಧು ಎಂದು ಘೋಷಿಸಿತ್ತು.   

error: Content is protected !!