ಹರಿಹರ, ಡಿ. 19- ಇದೇ 27 ರಂದು ತಾಲ್ಲೂಕಿನ 23 ಗ್ರಾಮ ಪಂಚಾಯತಿಗಳಿಗೆ ನಡೆಯುವ ಚುನಾವಣೆ ಅಂಗವಾಗಿ ಇಲ್ಲಿನ ಹರಪನಹಳ್ಳಿ ರಸ್ತೆಯ ಸೆಂಟ್ ಮೇರಿಸ್ ಶಾಲೆ ಆವರಣದಲ್ಲಿ ನಡೆಯುತ್ತಿರುವ ಚುನಾವಣಾ ಸಿಬ್ಬಂದಿಗಳ ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ನೀಡಿ ಪರಿಶೀಲಿಸಿದರು.
ತರಬೇತಿ ಕೇಂದ್ರದಲ್ಲಿ ಕಲ್ಪಿಸಲಾಗಿದ್ದ ಸೌಲಭ್ಯಗಳು, ಸಿದ್ದತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಚುನಾವಣಾ ವೇಳೆ ಯಾವುದೇ ತೊಂದರೆಯಾಗದಂತೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂ ದ್ರಪ್ಪ ಮಾತನಾಡಿ, ಚುನಾವಣೆಗೆ ಅಗತ್ಯ ಕ್ರಮ ಕೈಗೊಳ್ಳ ಲಾಗಿದ್ದು, 804 ಜನ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಸೇಂಟ್ ಮೇರಿಸ್ ಶಾಲೆ ಆವರಣದಲ್ಲಿ ಪ್ರತಿ ದಿನ 200 ಜನರಂತೆ ನಾಲ್ಕು ದಿನ ತರಬೇತಿ ನೀಡಲಾಗುತ್ತಿದೆ ಎಂದರು. ತಾಲ್ಲೂಕಿನ ನೋಡಲ್ ಅಧಿಕಾರಿ ಲೋಕೇಶ್, ಬಿಇಓ ಬಸವರಾಜಪ್ಪ ಇತರರು ಉಪಸ್ಥಿತರಿದ್ದರು.