ಹರಪನಹಳ್ಳಿ, ಡಿ.20 – ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಪೊಲೀಸ್ ಇಲಾಖೆ ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತದೆ ಎಂದು ಡಿವೈಎಸ್ಪಿ ಹಾಲಮೂರ್ತಿ ರಾವ್ ಹೇಳಿದರು.
ಪಟ್ಟಣದ ಪೊಲೀಸ್ ಇಲಾಖೆ ಆವರಣದಲ್ಲಿ ಗೃಹ ರಕ್ಷಕ ದಳದಿಂದ ಹಮ್ಮಿಕೊಂಡಿದ್ದ ಅಖಿಲ ಭಾರತ ಗೃಹ ರಕ್ಷಕ ದಳ ದಿನ ಆಚರಿಸಿ ಮಾತನಾಡಿ, ತುರ್ತು ಸಂದರ್ಭದಲ್ಲಿ ಯಾವುದೇ ಕೆಲಸ ಮಾಡುತ್ತಿದ್ದರೂ ಸಹ, ಇಲಾಖೆಯ ಕೆಲಸಕ್ಕೆ ಹಾಜರಾಗುವ ಹೋಂ ಗಾರ್ಡ್ಸ್ ಕೆಲಸ ಶ್ಲಾಘನೀಯ ಎಂದರು.
ಘಟಕದ ಅಧಿಕಾರಿ ಎಸ್.ಎಂ.ಮಲ್ಲಿಕಾರ್ಜುನಯ್ಯ ಮಾತನಾಡಿ, 1970ರಲ್ಲಿ ಹರಪನಹಳ್ಳಿಯಲ್ಲಿ ಗೃಹ ರಕ್ಷಕ ದಳ ಆರಂಭವಾಗಿದೆ. ಬೆನ್ನೂರು ಪಂಪಣ್ಣ ಮೊದಲ ಘಟಕ ಅಧಿಕಾರಿಯಾಗಿದ್ದರು, ಗೃಹ ರಕ್ಷಕ ದಳ ಸಿಬ್ಬಂದಿಗಳು ಸಮಾಜ ಸೇವಾರ್ಥ ಕೆಲಸ ಮಾಡುತ್ತಿದ್ದು, ವರ್ಷದ 365 ದಿನವೂ ಕೆಲಸ ಕೊಡಬೇಕು ಎಂದು ಮನವಿ ಮಾಡಿದರು.
ಸಿಪಿಐ ಕೆ.ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಎಚ್.ಕೆ. ರಾಮಪ್ಪ ಮಾತನಾಡಿದರು.
ನಿವೃತ್ತ ಗೃಹರಕ್ಷಕ ದಳ ಸಿಬ್ಬಂದಿಗಳಾದ ಶಿವಕುಮಾರ, ಚಂದ್ರಶೇಖರ, ಪರಮೇಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಗೃಹ ರಕ್ಷಕರಾದ ಪಿ.ವಾಗೀಶ್, ಎಂ.ಮಾಲತೇಶ್, ಸುಭಾಷ್, ಕೋಟೆಪ್ಪ ಸೇರಿದಂತೆ ಗೃಹ ರಕ್ಷಕ ದಳ ಸಿಬ್ಬಂದಿಗಳಿದ್ದರು.