ಕೂಡ್ಲಿಗಿ, ಡಿ. 18- ಪ್ರತಿಯೊಬ್ಬ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ, ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಪೊಲೀಸರು ಹಿರೇಹೆಗ್ಡಾಳ್ ಗ್ರಾಮದಿಂದ ಕೆಲ ಗ್ರಾಮಗಳಲ್ಲಿ ಪಥಸಂಚಲನದ ಮೂಲಕ ಮತ ಜಾಗೃತಿ ಮೂಡಿಸಿದರು.
ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿರುವ ನಿಟ್ಟಿನಲ್ಲಿ ಕೂಡ್ಲಿಗಿ ತಾಲ್ಲೂಕು ಚುನಾವಣೆಯ ಪೊಲೀಸ್ ನೋಡಲ್ ಅಧಿಕಾರಿ ಕೂಡ್ಲಿಗಿ ಸಿಪಿಐ ಪಂಪನಗೌಡ ನೇತೃತ್ವದಲ್ಲಿ ಕೂಡ್ಲಿಗಿ, ಗುಡೇಕೋಟೆ ಮತ್ತು ಹೊಸಹಳ್ಳಿ ಪಿಎಸ್ಐ ಗಳಾದ ತಿಮ್ಮಣ್ಣ ಚಾಮನೂರು, ರಾಮಪ್ಪ ಕಬ್ಬೇರ್, ನಾಗರಾಜ, ನಾಗರತ್ನ ಹಾಗೂ 40ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಸೇರಿ ಹಿರೇಹೆಗ್ಡಾಳ್, ಹನಸಿ, ಶಿವಪುರ, ಹಿರೆಕೆರೆಯಾಗಳಹಳ್ಳಿ, ಬಂಡ್ರಿ, ಕಾಳಿಂಗೇರಿ, ಚೋರುನೂರು, ಗುಡೇಕೋಟೆ, ಬೆಳಗಟ್ಟ, ಹುರುಳಿಹಾಳ್, ಮಾಕನಡಕು, ಹೊಸಹಳ್ಳಿ, ತಾಯಕನಹಳ್ಳಿ, ಆಲೂರು ಮತ್ತು ಹುಡೇಂ ಗ್ರಾಮಗಳಲ್ಲಿ ಪಥಸಂಚಲನ ನಡೆಸಿ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಅಕ್ರಮ ಮತದಾನ ತಡೆದು ನಿಷ್ಪಕ್ಷಪಾತವಾಗಿ ನಮ್ಮ ಮತದಾನದ ಹಕ್ಕನ್ನು ಚಲಾಯಿಸುವಲ್ಲಿ ಮುಂದಾಗಬೇಕು ಎಂದು ಜಾಗೃತಿ ಮೂಡಿಸಿದರು.
ಗುಡೇಕೋಟೆ ಪಿ. ಎಸ್. ಐ. ರಾಮಪ್ಪ ಅವರು ಮಾತನಾಡಿ, ಅಹಿತಕರ ಘಟನೆ ಗಳು ನಡೆಯದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.