ಕೂಡ್ಲಿಗಿ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ

ಕೂಡ್ಲಿಗಿ, ಡಿ.3- ಪಟ್ಟಣದ ಹೊರವಲಯದಲ್ಲಿ ಇಂದು ಮಧ್ಯಾಹ್ನ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಯು.ಎನ್. ರಾಜು ಎಂಬ ಯುವ ರೈತ ಪಟ್ಟಣದ ಹೊರವಲಯದಲ್ಲಿನ ಬಂಡೇ ಬಸಾಪುರ ತಾಂಡಾ ರಸ್ತೆಯಲ್ಲಿರುವ ತಮ್ಮ ತೋಟ ದಲ್ಲಿದ್ದಾಗ ಅನತಿ ದೂರದಲ್ಲಿರುವ ಜಂಗಯ್ಯನಗುಡ್ಡದ ತುತ್ತ ತುದಿಯಲ್ಲಿರುವ ಬಂಡೆಕಲ್ಲಿನ ಮೇಲೆ ಚಿರತೆಯೊಂದು ಕಂಡಿದೆ. 

ಚಿರತೆಯನ್ನು ಕಂಡಾಕ್ಷಣ ರಾಜು ತನ್ನ ಮೊಬೈಲ್‌ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದಾರೆ. ಕೂಡಲೇ ಅರಣ್ಯ ಇಲಾಖಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದ ಸುತ್ತಮುತ್ತಲ ಹೊಲಗಳಲ್ಲಿರುವ ನೂರಾರು ರೈತರು ನೆರೆದಿದ್ದಾರೆ. 

ಚಿರತೆ ಪ್ರತ್ಯಕ್ಷವಾಗಿರುವ ಸುದ್ಧಿ ತಿಳಿದ ಕೂಡಲೇ ಪಟ್ಟಣ ಪಂಚಾಯ್ತಿ ಸದಸ್ಯ ಕಾವಲಿ ಶಿವಪ್ಪನಾಯಕ ವಲಯ ಅರಣ್ಯಾಧಿಕಾರಿ ರಂಗನಾಥ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು, ಶೀಘ್ರವೇ ಚಿರತೆಯನ್ನು ಸೆರೆಹಿಡಿದು ಸುರಕ್ಷಿತ ಅರಣ್ಯಕ್ಕೆ ಬಿಡುವಂತೆ ಕ್ರಮಕ್ಕಾಗಿ ಕೋರಿದ್ದಾರೆ. ತಾವು ಸ್ಥಳಕ್ಕೆ ತೆರಳಿ ಸೂಕ್ತ ಕ್ರಮ ಜರುಗಿಸುವುದಾಗಿ ವಲಯ ಅರಣ್ಯಾಧಿಕಾರಿ ರಂಗನಾಥ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. 

error: Content is protected !!