ದಾವಣಗೆರೆ, ನ.27 – ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಮೂರ್ತಿ ಜಿನರಾಳಕರ್ ಅವರು ಬಡ್ತಿ ಹೊಂದಿದ್ದು, ಮಡಿಕೇರಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿ ವರ್ಗಾವಣೆಗೊಂಡಿದ್ದು, ಜಿಲ್ಲಾ ವಕೀಲರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಬೀಳ್ಕೊಡಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿನರಾಳಕರ್, ನನ್ನ ನ್ಯಾಯಾಂಗ ವೃತ್ತಿ ಜೀವನದಲ್ಲಿ ದಾವಣಗೆರೆಯನ್ನು ಎಂದಿಗೂ ಮರೆಯುವಂತಿಲ್ಲ. ಇಲ್ಲಿ ಮೂರೂವರೆ ವರ್ಷಗಳ ಕಾಲ ಸಂತೋಷದಿಂದ ನ್ಯಾಯಾಂಗ ಸೇವೆ ಸಲ್ಲಿಸಲು ವಕೀಲರ ಸಹಕಾರವೇ ಕಾರಣ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಸಾಬಪ್ಪ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಕಲಾ ಉಪಸ್ಥಿತರಿದ್ದರು.
ಸಭೆಯಲ್ಲಿ 1ನೇ ಹೆಚ್ಚುವರಿ ಜೆಲ್ಲಾ ನ್ಯಾಯಾಧೀಶರಾದ ಕೆಂಗಬಾಲಯ್ಯ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಾಗಶ್ರೀ, ಜಿಲ್ಲಾ ಸರ್ಕಾರಿ ವಕೀಲರಾದ ವೈ.ಮಂಜಪ್ಪ ಕಾಕನೂರು ಭಾಗವಹಿಸಿದ್ದರು. ವಕೀಲರಾದ ಎಂ.ಎಂ.ಕಿಲ್ಲೇದಾರ್, ಆನಂದ್, ವಿನಯ್ ಕುಮಾರ್ ಸಾಹುಕಾರ್, ವಿಜಯೇಂದ್ರ, ಶ್ರೀಮತಿ ಮಂಜುಳಾ ಮಾತನಾಡಿದರು.
ವಕೀಲರ ಸಂಘದ ಉಪಾಧ್ಯಕ್ಷ ದಿವಾಕರ್ ಸ್ವಾಗತಿಸಿದರು, ಕಾರ್ಯದರ್ಶಿ ಬಿ.ಎಸ್.ಲಿಂಗರಾಜ್ ನಿರೂಪಿಸಿದರು. ಸಹ ಕಾರ್ಯದರ್ಶಿ ಬಸವರಾಜ್ ವಂದಿಸಿದರು.