ಮಲೇಬೆನ್ನೂರು, ಆ.2- ಪಟ್ಟಣದಲ್ಲಿ ಭಾನುವಾರ ಮತ್ತೆ 4 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಇಲ್ಲಿನ 22ನೇ ವಾರ್ಡಿನ ನಿಟ್ಟೂರು ರಸ್ತೆಯಲ್ಲಿ ಈಗಾಗಲೇ ಕಂಟೈನ್ಮೆಂಟ್ ಜೋನ್ ಮಾಡಲಾಗಿರುವ ಪ್ರದೇಶದಲ್ಲಿ ಇಬ್ಬರಿಗೆ ಮತ್ತು 1ನೇ ವಾರ್ಡಿನ ದರ್ಗಾ ರಸ್ತೆಯಲ್ಲಿ ಸೀಲ್ ಡೌನ್ ಆಗಿರುವ ಮನೆಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ.
ಕುಂಬಳೂರಿನಲ್ಲಿ 5 : ಗ್ರಾಮದ ಬೇರೆ ಬೇರೆ ಮೂರು ಕುಟುಂಬದ ಐವರಿಗೆ ಸೋಂಕು ದೃಢಪಟ್ಟಿದೆ. ಇದೇ ಗ್ರಾಮದಲ್ಲಿ ಶುಕ್ರವಾರ ಗಂಡ-ಹೆಂಡತಿಗೆ ಸೋಂಕು ಕಾಣಿಸಿಕೊಂಡಿತ್ತು. ಇದುವರೆಗೆ ಮಲೇಬೆನ್ನೂರು ಪಟ್ಟಣ ಸೇರಿ ಹೋಬಳಿಯಲ್ಲಿ ಒಟ್ಟು 62 ಪ್ರಕರಣಗಳಾಗಿವೆ ಎಂದು ಉಪ ತಹಶೀಲ್ದಾರ್ ಆರ್. ರವಿ ತಿಳಿಸಿದ್ದಾರೆ.
ಮಾಸ್ಕ್, ಸ್ಯಾನಿಟೈಸರ್ ವಿತರಣೆ : ಕೊರೊನಾ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಪಟ್ಟಣದ ಆಶಾ ಕಾರ್ಯಕರ್ತೆಯರಿಗೆ ಭಾನುವಾರ ಪುರಸಭೆಯಲ್ಲಿ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಆರೋಗ್ಯಾಧಿಕಾರಿ ಗುರುಪ್ರಸಾದ್ ಅವರು ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು.