ದಾವಣಗೆರೆ, ಅ.23- ಅಹಿಂಸೆ ಮತ್ತು ಪ್ರೀತಿ, ವಾತ್ಸಲ್ಯದ ನಡವ ಳಿಕೆಗಳಿಂದ ಸಹಕಾರದ ಜೀವನ ಕಾಣಲು ಸಾಧ್ಯ ವಿದ್ದು, ಇದುವೇ ಮಹಾತ್ಮ ಗಾಂಧೀಜಿಯವರ ತತ್ವಾ ದರ್ಶವಾಗಿತ್ತು ಎಂದು ಪಂಚಲಿಂಗ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್.ಮಂಜುನಾಥ ಅಗಡಿ ಹೇಳಿದರು.
ನಗರದ ಬಿ.ಜೆ.ಎಂ ಮತ್ತು ಜೆ.ಎನ್.ಬಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಮಹಾತ್ಮ ಗಾಂಧೀಜಿ ಯವರ 152ನೇ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರೀಜಿ ಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರೊನಾ ವಿಷಮ ಸ್ಥಿತಿಯಲ್ಲಿ ಬದುಕುತ್ತಿರುವ ದಿನಗಳಾಗಿರುವುದರಿಂದ ದೈಹಿಕ ಅಂತರ, ಮುಖಗವುಸು ಧಾರಣೆ ಅನಿವಾರ್ಯವಾಗಿದ್ದು, ಆರೋಗ್ಯ ಸಂರಕ್ಷಿಸಿಕೊ ಳ್ಳುವ ಹೊಣೆಗಾರಿಕೆ ಇರುವುದರಿಂದ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು. ಮಕ್ಕಳ ಕ್ಷೇತ್ರದ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಪಂಚಲಿಂಗ ಎಜುಕೇಶನ್ ಟ್ರಸ್ಟ್‍ನ ದಾರಿದೀಪ ತೆರೆದ ತಂಗುದಾಣದ ಸಂಯೋಜಕರಾದ ಎನ್.ಸುಲೋಚನಮ್ಮಗೆ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಾರತ ಸೇವಾ ರತ್ನ ರಾಷ್ಟ್ರ ಪ್ರಶಸ್ತಿಯನ್ನು ಅಕಾಡೆಮಿ ಅಧ್ಯಕ್ಷ ಎನ್.ಮಲ್ಲೇಶಪ್ಪ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಲಲಿತ, ಸೀಮಾ, ರೂಪಾ, ಶಕುಂತಲಮ್ಮ, ಚೌಡಮ್ಮ, ಕರಿಯಮ್ಮ ಸೇರಿದಂತೆ ಮತ್ತಿತರರಿದ್ದರು.