ಕೂಡ್ಲಿಗಿ, ಅ.23- ತಾಲ್ಲೂಕಿನಾದ್ಯಂತ ಮಂಗಳವಾರ ಗುಡುಗು ಸಹಿತ ಮಳೆಯಾಗಿದ್ದು, ಈಗ್ಗೆ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಟಿ.ಸೂರವ್ವನಹಳ್ಳಿ, ಬಯಲು ತುಂಬರಗುದ್ದಿ, ಹರವದಿ, ಓಬಳಶೆಟ್ಟಿಹಳ್ಳಿ, ಹಾರಕಬಾವಿ, ಬೆಳ್ಳಿಕಟ್ಟೆ, ಬಣವಿಕಲ್ಲು, ಚಿಕ್ಕೋಬನಹಳ್ಳಿ ಸೇರಿದಂತೆ ವಿವಿಧೆಡೆ ಭಾಗಶಃ ಮನೆಗಳು ಬಿದ್ದಿದ್ದು, ಕೈವಲ್ಯಾಪುರ ಸೇರಿದಂತೆ ಕೆಲ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ.
ಬಣವಿಕಲ್ಲು ಗ್ರಾಮದಲ್ಲಿ ಮಂಜುನಾಥ ಎಂಬುವವರ ಹಳೇ ಮನೆಯೊಂದು ಭಾಗಶಃ ಬಿದ್ದಿದೆ, ಅದರಂತೆ ಚಿಕ್ಕೋಬನಹಳ್ಳಿಯಲ್ಲಿ ಭಾಗಶಃ ಒಂದು ಮನೆ ಬಿದ್ದಿರುವುದು ತಿಳಿದುಬಂದಿದ್ದು, ಆಯಾ ಹೋಬಳಿಯ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಕೂಡ್ಲಿಗಿ ಸಮೀಪದ ಕೈವಲ್ಯಾಪುರದ ದಾದಯ್ಯಕೆರೆ ತುಂಬಿ ಹರಿಯುತ್ತಿದ್ದು, ತಾಲ್ಲೂಕಿನಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ಕೆರೆಗಳು, ಗೋಕಟ್ಟೆಗಳು ತುಂಬಿ ಹರಿಯುತ್ತಿವೆ ಎಂದು ತಿಳಿದಿದೆ.
ಈ ಬಾರಿಯ ಮಳೆಗೆ ತಾಲ್ಲೂಕಿನ ರೈತರು ಬೆಳೆದ ಬೆಳೆಗಳೂ ಸಹ ನಿರಂತರ ಮಳೆಗೆ ನಷ್ಟವಾಗಿದ್ದು ರಾಗಿ, ಮೆಕ್ಕೆಜೋಳ, ಶೇಂಗಾ ನೀರು ಪಾಲಾಗಿವೆ. ಕೆಲವು ಭಾಗಗಳಲ್ಲಿ ಮೆಕ್ಕೆಜೋಳ, ರಾಗಿ ಬೆಳೆಗಳು ನೆಲಕ್ಕೆ ಬಿದ್ದು ಕೊಳೆಯುತ್ತಿವೆ. ತಾಲ್ಲೂಕಿನಲ್ಲಿ ಮಳೆ ಬಿದ್ದ ಪ್ರಮಾಣ ಈ ರೀತಿ ಇದೆ. ಕೂಡ್ಲಿಗಿ – 15.5 ಮಿ.ಮೀ, ಗುಡೇಕೋಟೆ – 44.2 ಮಿ.ಮೀ, ಹೊಸಹಳ್ಳಿ – 23.4 ಮಿ.ಮೀ, ಬಣವಿಕಲ್ಲು – 66.1 ಮಿ.ಮೀ, ಚಿಕ್ಕಜೋಗಿಹಳ್ಳಿ – 50.4 ಮಿ.ಮೀ.ನಷ್ಟು ಮಳೆ ಸುರಿದಿದೆ ಎಂದು ತಾಲ್ಲೂಕು ಕಚೇರಿ ಮೂಲಗಳು ತಿಳಿಸಿವೆ.