ದಾವಣಗೆರೆ, ಜು.18- ಮಾಸಿಕ 12 ಸಾವಿರ ರೂ. ಗೌರವ ಧನ ಖಾತರಿಪಡಿಸಬೇ ಕೆಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ ಕೈಗೊಂಡಿರುವ ಅನಿರ್ದಿಷ್ಟ ಹೋರಾಟ ಇಂದಿಗೆ 9 ದಿನಗಳನ್ನು ಪೂರೈಸಿದೆ.
ಅಲ್ಲದೇ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆಯ ಕರೆಯ ಮೇರೆಗೆ ಹೋರಾಟದ ಭಾಗವಾಗಿ ಇಂದೂ ಸಹ ಆಶಾ ಕಾರ್ಯಕರ್ತೆಯರು ತಮ್ಮ ಕುಟುಂಬ ಸಮೇತರಾಗಿ ಹಾಗೂ ತಾವು ಆರೋಗ್ಯ ಸೇವೆ ನೀಡಿದ ಜನ ಸಾಮಾನ್ಯರಿಂದ ಹಕ್ಕೊತ್ತಾಯಗಳ ಪೋಸ್ಟರ್ ಗಳನ್ನು ಹಿಡಿದು ಫೋಟೋ ತೆಗೆದುಕೊಂಡು ಆನ್ ಲೈನ್ ಚಳುವಳಿ ಕೈಗೊಂಡರು.
ಆನ್ ಲೈನ್ ಚಳುವಳಿಯು ಭಾನುವಾರವೂ ಮುಂದುವರೆಯಲಿದೆ. ಸೋಮವಾರದಿಂದ ವಿವಿಧ ಹಂತಗಳಲ್ಲಿ ಮುಷ್ಕರದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಬಹುಮುಖ್ಯವಾಗಿ ಆಶಾ ಕಾರ್ಯಕರ್ತೆಯರು ಹಳ್ಳಿಗಳ ಸಾರ್ವಜನಿಕರೊಂದಿಗೆ ಸೇರಿಕೊಂಡು ಶಾಸಕರ ಮನೆ ಮುಂದೆ ಪ್ರತಿಭಟನಾ ಧರಣಿ ನಡೆಸುವರು ಎಂದು ಸಂಘಟನೆ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು ತಿಳಿಸಿದ್ದಾರೆ.