ಜಗಳೂರು, ಅ.21- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಜಮಾಯಿಸಿದ್ದ ಕಾರ್ಯ ಕರ್ತರು ಎಸ್‌ಎಫ್‌ಐ ರಾಜ್ಯ ಕರೆಗೆ ಬೆಂಬಲಿಸಿ ಮನವಿ ಸಲ್ಲಿಸಿದರು.
ಎಸ್‌ಎಫ್‌ಐ ಜಿಲ್ಲಾ ಮುಖಂಡ ಅನಂತರಾಜ್ ಮಾತನಾಡಿ, ರಾಜ್ಯ ಸರ್ಕಾರ ಆರ್‌ಟಿಇ ಶಿಕ್ಷಣ ನೀತಿ 8ನೇ ತರಗತಿಗೆ ಮೊಟಕುಗೊಳಿಸಿ ರದ್ದುಪಡಿಸಿರುವುದು ಖಂಡನೀಯ. ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದು, ಮಕ್ಕಳಿಗೆ ಬಿಸಿಯೂಟ ಯೋಜನೆ ಸ್ಥಗಿತಗೊಳಿಸಿದ್ದು, ಇದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರಿಗೆ ಕುಟುಂಬ ನಿರ್ವಹಣೆ ತೀವ್ರ ಸಮಸ್ಯೆಯಾಗಿದ್ದು, ಮಕ್ಕಳಿಗೆ ಆಹಾರ ದಾಸ್ತಾನುಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ನಡೆದ ಪಿಯು ಕಾಲೇಜು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದ್ದು, ಕೂಡಲೇ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಕೀಲ ಆರ್. ಓಬಳೇಶ್, ತಾಲ್ಲೂಕು ಅಧ್ಯಕ್ಷ ಅಂಜಿನಪ್ಪ, ಎಐಎಸ್ಎಫ್ ರಾಜ್ಯ ಸಹಕಾರ್ಯದರ್ಶಿ ಮಾದಿಹಳ್ಳಿ ಕೆ. ಮಂಜಪ್ಪ, ಯುವರಾಜ್ ಹೆಚ್.ಎಂ. ಜೊಳೆ ಕರಿಬಸಪ್ಪ, ಹನುಮಂತಪ್ಪ, ಅನ್ವರ್‌ಸಾಬ್, ಜಕಾವುಲ್ಲಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.