ದಾವಣಗೆರೆ, ಅ.9- ಮಹಾನಗರ ಪಾಲಿಕೆ ವತಿಯಿಂದ ನಗರದಲ್ಲಿ ಚಿಕ್ಕ ವಾಹನಗಳ ಮೂಲಕ ಸಂಗ್ರಹಿಸುವ ತಾಜ್ಯವನ್ನು ದೊಡ್ಡ ವಾಹನಗಳ ಮೂಲಕ ಸಾಗಿಸಲು ಪಿ.ಬಿ. ರಸ್ತೆಯಲ್ಲಿ ಡಂಪಿಂಗ್ ಮಾಡಲಾಗುತ್ತದೆ.
ಬೆಳ್ಳಂಬೆಳಿಗ್ಗೆಯೇ ಪಿ.ಬಿ. ರಸ್ತೆಯ ಶ್ರೀಶೈಲ ಮಠದ ಬಳಿ ಹತ್ತಾರು ಪಾಲಿಕೆ ವಾಹನಗಳು ಕಸ ತುಂಬಿಕೊಂಡು ನಿಂತಿರುತ್ತವೆ. ಇದರಿಂದ ವಾಯುವಿಹಾರಿಗಳು, ವಾಹನ ಸವಾರರು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೇ, ಚಿಕ್ಕ ವಾಹನಗಳಿಂದ ದೊಡ್ಡ ವಾಹನಕ್ಕೆ ಕಸ ತುಂಬುವಾಗ ಸಾಕಷ್ಟು ಕಸ ರಸ್ತೆಯಲ್ಲಿಯೇ ಬಿದ್ದಿರುತ್ತದೆ. ಅದನ್ನು ಸ್ವಚ್ಛಗೊಳಿಸದ ಕಾರಣ ಗಾಳಿಗೆ ಮತ್ತೆ ಅಂಗಡಿಗಳ ಬಾಗಿಲಿಗೆ ಬಂದು ಬಿದ್ದಿರುತ್ತದೆ.
ತ್ಯಾಜ್ಯವನ್ನು ಡಂಪ್ ಮಾಡಲು ಪಿ.ಬಿ. ರಸ್ತೆಯ ಅಕ್ಕ ಪಕ್ಕದಲ್ಲಿ ಸಾಕಷ್ಟು ಖಾಲಿ ಜಾಗವಿದೆ. ರಸ್ತೆಯ ಬದಲು ಆ ಖಾಲಿ ಪ್ರದೇಶದಲ್ಲಿ ಡಂಪ್ ಮಾಡಿಸಿ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರ ಹಿತ ಕಾಪಾಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.