ಸಂತೆಬೆನ್ನೂರು, ಅ. 10 – ಇಲ್ಲಿನ ರಸ್ತೆಯ ಮೇಲೆ ಪುಟ್ಟ ಹೋಟೆಲ್ ನಡೆಸುತ್ತಿರುವ ಸಿದ್ದಪ್ಪ ಸಾವಿತ್ರಮ್ಮ ದಂಪತಿಯ ದ್ವಿತೀಯ ಪುತ್ರಿ ಎಸ್. ಶೖತಿ ಈ ಸಾಲಿನ ದಾವಣಗೆರೆ ವಿಶ್ವವಿದ್ಯಾನಿಲಯದ ಎಂ.ಎ. ಪದವಿ ರಾಜ್ಯಶಾಸ್ತ್ರದಲ್ಲಿ ಪ್ರಥಮ ರಾಂಕ್ ಪಡೆಯುವ ಮೂಲಕ ಗ್ರಾಮಕ್ಕೆ ಮತ್ತು ತಂದೆ-ತಾಯಿಗೆ ಕೀರ್ತಿ ತಂದಿದ್ದಾರೆ.
ಕಡು ಬಡತನದಿಂದಲೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಪೂರೈಸಿದ ಶೃತಿ, ವಿದ್ಯಾಭ್ಯಾಸಕ್ಕೆ ಪೋಷಕರು ಆರ್ಥಿಕ ಕಾರಣಗಳನ್ನು ಕೊಡದೆ ಕಷ್ಟದ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸಕ್ಕೆ ಅನು ಕೂಲ ಮಾಡಿಕೊಟ್ಟು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಫಲ ವಾಗಿ ಇಂದು ನಾನು ಸಾಧನೆಗೈಯ್ಯಲು ಸಾಧ್ಯವಾಯಿತು. ಅವರ ಆಶೀರ್ವಾದದಿಂದ ಮುಂದೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ನನ್ನ ಪ್ರಯತ್ನ ಯಾವಾಗಲೂ ಮುಡುಪಾಗಿಡುತ್ತೇನೆ. ನನಗೆ ಚಿನ್ನದ ಪದಕ ಬಂದದ್ದು ಖುಷಿಯಾದರೂ, ನನ್ನ ತಂದೆ-ತಾಯಿಯ ಸಂತೋಷ ಮತ್ತು ನಗು ನನಗೆ ಆತ್ಮಸ್ಥೈರ್ಯ ನೀಡಿದೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವಿಶ್ವವಿದ್ಯಾನಿಲಯದ ಗ್ರಂಥಾಲಯ ನನ್ನ ಓದಿಗೆ ತುಂಬಾ ಸಹಾಯವಾಯಿತು. ಮುಂದೆ ಪಿಹೆಚ್‍ಡಿ ಮಾಡುವ ಉದ್ದೇಶವಿದ್ದು, ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದೇನೆ ಎಂದು ತಮ್ಮ ಗುರಿ ಮತ್ತು ಮುಂದೆ ಸೇವೆ ಮಾಡುವ ಮನೋಭಾವ ವ್ಯಕ್ತಪಡಿಸಿದರು.