ದಾವಣಗೆರೆ, ಅ. 10- ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಮಳೆಯಿಂದಾಗಿ ಸುಮಾರು 7.67 ಲಕ್ಷ ರೂ.ನಷ್ಟ ಸಂಭವಿಸಿದೆ.
ವಾಯುಭಾರ ಕುಸಿತ ದಿಂದಾಗಿ ನಿನ್ನೆ ಸಂಜೆ ಆರಂಭವಾದ ಮಳೆ ತಡ ರಾತ್ರಿವರೆಗೆ ಸುರಿಯಿತು. ಹಲವು ಗ್ರಾಮಗಳಲ್ಲಿ ಕೊಯ್ಲಿಗೆ ಬಂದ ಭತ್ತದ ಬೆಳೆ ನೀರಿನಲ್ಲಿ ಮುಳುಗಿತು.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 9 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 70 ಸಾವಿರ ರೂ. ನಷ್ಟ, ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, 20 ಸಾವಿರ ರೂ. ನಷ್ಟ, ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 8 ಪಕ್ಕಾ ಮನೆಗಳ ಹಾನಿಯಿಂದಾಗಿ 5.50 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ.
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಕಚ್ಚಾ ಮನೆಗೆ ಹಾನಿಯಾಗಿದ್ದು, 85 ಸಾವಿರ ರೂ. ನಷ್ಟ ಹಾಗೂ 1 ದನದ ಕೊಟ್ಟಿಗೆಗೆ ಹಾನಿಯಾಗಿ 10 ಸಾವಿರ ರೂ. ನಷ್ಟ ಸಂಭವಿಸಿದೆ. ನ್ಯಾಮತಿ ತಾಲ್ಲೂಕಿನಲ್ಲಿ 2 ಎಕರೆ ಹತ್ತಿ ಬೆಳೆಗೆ ಹಾನಿಯಾಗಿದ್ದು, 20 ಸಾವಿರ ರೂ. ನಷ್ಟ ಹಾಗೂ ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 2 ಪಕ್ಕಾ ಮನೆಗಳಿಗೆ ಹಾನಿಯಾಗಿ 12 ಸಾವಿರ ರೂ. ನಷ್ಟ ಸಂಭವಿಸಿದೆ.
ಲೋಕಿಕೆರೆ ಗ್ರಾಮದಲ್ಲಿ ಮಳೆ ಹಾನಿ ವೀಕ್ಷಿಸಿದ ಡಿಸಿ ಬೀಳಗಿ
ದಾವಣಗೆರೆ, ಅ. 10- ತಾಲ್ಲೂಕಿನ ಲೋಕಿಕೆರೆ ಗ್ರಾಮದಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವೀಕ್ಷಿಸಿದರು ಈ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿ, ಗಿಡ ಗಂಟಿಗಳಿಂದ ತುಂಬಿಕೊಂಡಿರುವ ಚರಂಡಿ ಹಾಗೂ ಕಲ್ವರ್ಟ್ ಗಳನ್ನು ತಕ್ಷಣ ಸ್ವಚ್ಛಗೊಳಿಸುವಂತೆ ಸೂಚಿಸಿದರು. ಜಲಾವೃತವಾಗಿರುವ ಭತ್ತದ ಗದ್ದೆಗಳನ್ನು ವೀಕ್ಷಿಸಿದರು. ತಹಶೀಲ್ದಾರ್ ಗಿರೀಶ್, ಪಿ.ಆರ್.ಇ.ಡಿ.ಎಂಜಿನಿಯರ್ ಪರಮೇಶ್ ಇದ್ದರು.