ಹೊನ್ನಾಳಿ,ಜು.2- ಸವಳಂಗ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಜಿಲ್ಲಾ ಕೃಷಿ ಇಲಾಖೆಯಿಂದ ಜಲಾನಯನ ಅಭಿವೃದ್ಧಿ ಮೂಲಕ ಬರಗಾಲವನ್ನು ತಡೆಯುವಿಕೆ ಯೋಜನೆಯಡಿ ತೋಟಗಾರಿಕೆ ಸಸಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
100 ರೈತರಿಗೆ ರೂ. 500 ಬೆಲೆಯ ಮಾವು, ಬೇವು, ತೆಂಗು, ಲಿಂಬೆ, ಕರಿಬೇವು ಸೇರಿದಂತೆ ವಿವಿಧ ಸಸಿಗಳನ್ನು ಸಂಸದ ಜಿ.ಎಂ.ಸಿದ್ದೇಶ್ವರ ಅವರು ರೈತರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ರೈತರಿಗೆ ರೂ. 500 ಮೌಲ್ಯದ ಸಸಿಗಳನ್ನು ಸಾಂಕೇತಿಕವಾಗಿ ನೀಡಲಾಗಿದೆ. ತಮ್ಮ ಮನೆ ಸುತ್ತಮುತ್ತ ಸಸಿ ಬೆಳೆಸುವ ಮೂಲಕ ರೈತರು ಸಸಿಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೊರೊನಾ ಸಂಕಷ್ಟದಲ್ಲಿ ಅವಳಿ ತಾಲ್ಲೂಕುಗಳಾದ ಹೊನ್ನಾಳಿ-ನ್ಯಾಮತಿ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕೆಲಸ ಮಾಡಲಾಗಿದ್ದು, ಜನರಿಗೆ ಉದ್ಯೋಗ ಒದಗಿಸಲಾಗಿದೆ. ಈಗಾಗಲೇ 16 ಸಾವಿರ ರೈತರಿಗೆ ರೂ. 8 ಕೋಟಿ ಹಣ ಜಮಾ ಮಾಡಲಾಗಿದೆ ಎಂದು ತಿಳಿಸಿದರು.
ಜಿ.ಪಂ. ಅಧ್ಯಕ್ಷರಾದ ಶ್ರೀಮತಿ ದೀಪಾ ಜಗದೀಶ್, ಜಿ.ಪಂ. ಸದಸ್ಯರಾದ ಉಮಾ ಎಂ.ಪಿ. ರಮೇಶ್, ಎಂ.ಆರ್. ಮಹೇಶ್ ಮತ್ತಿತರರು ಹಾಜರಿದ್ದರು.