ಮಲೇಬೆನ್ನೂರು, ಅ.1- ಈ ತಿಂಗಳು ಮುಗಿಯುವುದರ ಒಳಗಾಗಿ ಅತಿಥಿ ಗೃಹವನ್ನು ಸಂಪೂರ್ಣವಾಗಿ ರೆಡಿಮಾಡಿ ದೇವಸ್ಥಾನ ಸಮಿತಿಗೆ ಹಸ್ತಾಂತರ ಮಾಡುವುದಾಗಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಪಾಲಾಕ್ಷಿ ಹೇಳಿದರು.
ಅವರು ಗುರುವಾರ ಕೊಮಾರನಹಳ್ಳಿಯ ಶ್ರೀ ಲಕ್ಷ್ಮಿ ರಂಗನಾಥಸ್ವಾಮಿ ದೇವಸ್ಥಾನದ ಹೂ ತೋಟದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 45.38 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸವನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. 2016 ರಲ್ಲಿ ಕಾಮಗಾರಿ ಪ್ರಾರಂಭಗೊಂಡು 2018 ಕ್ಕೆ ಮುಕ್ತಾಯಗೊಂಡಿರುತ್ತದೆ. ಆದರೆ ಫರ್ನೀಚರ್, ಶೌಚಾಲಯ ಸೇರಿದಂತೆ ಸಣ್ಣಪುಟ್ಟ ಕೆಲಸಗಳು ಅಪೂರ್ಣಗೊಂಡಿರುವ ಕಾರಣ ಯಾತ್ರಿ ನಿವಾಸ ಪಾಳು ಬಿದ್ದಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಮಾಡಿದ್ದರೂ ಗಮನ ಹರಿಸದ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಉಪತಹಶೀಲ್ದಾರ್ ಆರ್. ರವಿ ಅವರ ಮನವಿ ಮೇರೆಗೆ ಸ್ಥಳಕ್ಕೆ ಆಗಮಿಸಿದ್ದರು.
ಭೂ ಸೇನಾ ನಿಗಮದ ಎಇಇ ಗಣೇಶ್‌ಬಾಬು ಅವರು ಇದರ ಜವಾಬ್ದಾರಿ ಹೊತ್ತಿದ್ದು, ಅವರೇ ಕಾಮಗಾರಿಯನ್ನು ಪೂರ್ಣಗೊಳಿಸಿ, ತಿಂಗಳೊಳಗೆ ದೇವಸ್ಥಾನ ಸಮಿತಿಗೆ ನೀಡಬೇಕೆಂದು ತಾಕೀತು ಮಾಡಿದರು.
ಪ್ರವಾಸೋದ್ಯಮ ಇಲಾಖೆಯ ನವೀನ್, ಉಪತಹಶೀಲ್ದಾರ್ ಆರ್. ರವಿ, ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ದೇವಸ್ಥಾನ ಸಮಿತಿಯ ಧರ್ಮರಾಜ್ ಹಾಗೂ ಗ್ರಾಮಸ್ಥರು ಈ ವೇಳೆ ಹಾಜರಿದ್ದರು.