ರೈತರ ಪರವಾಗಿ ಯುವಜನತೆ ಕೆಲಸ ಮಾಡಲಿ ಮಲ್ಲಿಕಾರ್ಜುನ್ ಕರೆ
ದಾವಣಗೆರೆ, ಜೂ.27- ತಾಲ್ಲೂಕಿನ ಕಾಡಜ್ಜಿ ಗ್ರಾಮದ ಯುವಕರು ಎಂ. ನಾರದಮುನಿ (ನಾನಿ) ಅವರ ನಿರ್ದೇಶನದಲ್ಲಿ ರೈತರ ಬದುಕಿನ ಕುರಿತ ತೆಗೆದ `ರೈತ ಮಿತ್ರ’ ಕಿರುಚಿತ್ರವನ್ನು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಬಿಡುಗಡೆ ಮಾಡಿದರು.
ತಮ್ಮ ಗೃಹ ಕಛೇರಿ `ಶಿವ ಪಾರ್ವತಿ’ಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಎಸ್ಸೆಸ್ಸೆಂ ಅವರು ಯೂಟ್ಯೂಬ್ಗೆ ಆಪ್ಲೋಡ್ ಮಾಡುವ ಮೂಲಕ ಬಿಡುಗಡೆಗೊಳಿಸಿದರು.
ಸುಮಾರು 18 ನಿಮಿಷಗಳಲ್ಲಿ ರೈತರು ಮತ್ತವರ ಮಕ್ಕಳ ಸಮಸ್ಯೆಗಳ ವಾಸ್ತವಾಂಶವನ್ನು ಮನಮುಟ್ಟುವಂತೆ ನಾರದಮುನಿ ಅವರು ಚಿತ್ರಿಸಿದ್ದು, ಈ ಚಿತ್ರವನ್ನು ಗ್ರಾಮಾಂತರ ಪ್ರದೇಶದ ಜನರಷ್ಟೇ ಅಲ್ಲ ನಗರ ಪ್ರದೇಶದ ಜನರೂ ವೀಕ್ಷಿಸುವಂತೆ ಎಸ್ಸೆಸ್ಸೆಂ ಕರೆ ನೀಡಿದರು.
ರೈತರ ಬದುಕಿನ ಸಾಕಷ್ಟು ಗೋಜಲುಗಳನ್ನು ಚಿತ್ರಿಸಿರುವ ಇಡೀ ಚಿತ್ರ ತಂಡವೇ ಸ್ಥಳೀಯ ಪ್ರತಿಭಾವಂತರಾಗಿದ್ದು, ರೈತರ ಸಮಸ್ಯೆಯನ್ನು ಜಗತ್ತಿಗೇ ತೋರಿಸಲು ಇಂತಹ ಕಿರುಚಿತ್ರ, ಸಾಕ್ಷ್ಯಚಿತ್ರಗಳಾಗಬೇಕಿದೆ. ಯುವಜನತೆ ರೈತರ ಸಂಕಷ್ಟಗಳನ್ನು ಹೊರಜಗತ್ತಿಗೆ ತಿಳಿಸುವ ಮೂಲಕ ರೈತರ ಪರವಾಗಿ ಕೆಲಸ ಮಾಡಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಮಿತ್ರ ಕಿರುಚಿತ್ರದ ನಿರ್ದೇಶಕ ಎಂ. ನಾರದಮುನಿ (ನಾನಿ), ಕಾಂಗ್ರೆಸ್ ಮುಖಂಡ ಕಾಡಜ್ಜಿ ಮುರುಳಿ, ಚಿತ್ರ ತಂಡದ ನಂಜುಂಡಿ, ಸಿದ್ದೇಶ್, ಚಂದ್ರು, ಆಂಜನೇಯ, ಶಿವು, ನವೀನ್, ತೇಜು, ನಾಗರಾಜ್, ಅನಂತ್, ಕಿರುಚಿತ್ರದ ಬಾಲನಟ ಮಾ|| ಲೋಕಮಿತ್ರ ಇನ್ನಿತರರಿದ್ದರು.