ದಾವಣಗೆರೆ, ಜೂ.20- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ಜಿಲ್ಲಾ ಸಮಿತಿಯಿಂದ ನಗರದಲ್ಲಿ ನಿನ್ನೆ ಪ್ರತಿಭಟನೆ ಮತ್ತು ಜನಜಾಗೃತಿ ನಡೆಸಲಾಯಿತು.
ಭಾರತ ಸರ್ಕಾರ ಲಾಕ್ಡೌನ್ನಿಂದ ಉಂಟಾದ ದುಷ್ಪರಿಣಾಮಗಳನ್ನು ಎದುರಿಸಲು ಯಾವುದೇ ಕ್ರಮ ಜರುಗಿಸಲಿಲ್ಲ. ಕಾರ್ಮಿಕರಿಗೆ ಕೆಲಸ, ಆಹಾರ, ವಸತಿಯನ್ನು ಪೂರೈಸುವ ಬದಲು ಉದ್ಯೋಗ ಕಡಿತ, ಸಂಬಳ ಕಡಿತ, ಕೆಲ ಸದ ಅವಧಿ ಹೆಚ್ಚಳದಂತಹ ಕ್ರಮಗಳನ್ನು ಜಾರಿ ಗೊಳಿಸಲು ಮುಂದಾಗಿದೆಯಲ್ಲದೇ, ಕಾರ್ಮಿಕ ಕಾನೂನುಗಳನ್ನೇ ಕಿತ್ತು ಹಾಕಲು ಹೊರಟಿದೆ. ಸರ್ಕಾರ ನೊಂದ ಕುಟುಂಬಗಳಿಗೆ ಯಾವ ಪರಿ ಹಾರ ನೀಡಲಿಲ್ಲ. ಇದಕ್ಕೆ ಬದಲಾಗಿ ಲಾಕ್ಡೌನ್ ಹಿಂತೆಗೆದುಕೊಂಡು ಕೋವಿಡ್-19 ತಡೆಗಟ್ಟುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ಹೊರಿಸಿ ಕೈ ತೊಳೆದುಕೊಳ್ಳಲು ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಣಿಕಂಠ ವೃತ್ತ, ನಿಟುವಳ್ಳಿ, ಜಯದೇವ ವೃತ್ತ, ಮಂಡಕ್ಕಿ ಭಟ್ಟಿ ಹತ್ತಿರದ ಸಿದ್ದರಾಮೇಶ್ವರ ಬಡಾವಣೆ ವೃತ್ತದಲ್ಲಿ ಪ್ರತಿಭಟಿಸಿ, ಜನಜಾಗೃತಿಗೆ ಕರಪತ್ರ ಹಂಚಲಾಯಿತು. ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾದ ಕೆ.ಹೆಚ್. ಆನಂದರಾಜು, ಕೆ.ಎಲ್. ಭಟ್, ಶ್ರೀನಿವಾಸ, ತಿಮ್ಮಣ್ಣ ಹೊನ್ನೂರು, ಎ. ಗುಡ್ಡಪ್ಪ, ತಿಮ್ಮಾರೆಡ್ಡಿ, ಹನುಮಂತನಾಯ್ಕ, ಭರಮಪ್ಪ, ರಫೀಕ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.