ಹರಿಹರ, ಜೂ.6- ಹರಿಹರದ ತುಂಗಭದ್ರಾ ನದಿಗೆ ಕಟ್ಟಿರುವ ನೂರಾರು ವರ್ಷಗಳ ಹಳೆಯದಾದ ಸೇತುವೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಕಲಾವಿದ, ಪರಿಸರ ಪ್ರೇಮಿ ಡಾ. ಜಿ.ಜೆ. ಮೆಹೆಂದಳೆ ಹೇಳಿದ್ದಾರೆ.
ಹೊಸ ಸೇತುವೆ ಬರುವ ಮೊದಲು ಸೇತುವೆಯ ಇಕ್ಕೆಲಗಳಲ್ಲಿ ಬೆಳೆದ ಆಲದ ಹಾಗೂ ಅರಳಿಮರ ಮತ್ತು ಕೆಲ ಕಾಡುಮರಗಳನ್ನು ಕಡಿದು ಸೇತುವೆ ಶಿಥಿಲಗೊಳ್ಳದಂತೆ ಜಾಗೃತಿ ವಹಿಸಲಾಗುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಸೇತುವೆ ದುರಸ್ತಿ, ನಿರ್ವಹಣೆ ಮಾಡದೆ ಸೇತುವೆ ಶಿಥಿಲಗೊಳ್ಳುತ್ತಿದೆ.
ಅಲ್ಲದೆ, ಎರಡು ಭಾರೀ ಪ್ರಮಾಣದ ನೀರಿನ ಪೈಪ್‌ಲೈನ್‌ಗಳ ಭಾರ ಬೇರೆ. ಹರಿಹರ-ದಾವಣಗೆರೆಗೆ ಪೈಪ್‌ಲೈನ್ ಹಾಕುವ ಕಂಟ್ರ್ಯಾಕ್ಟರ್ ನದಿಯಲ್ಲಿಂದ ಅಥವಾ ಪರ್ಯಾಯ ಮಾರ್ಗದ ಮೂಲಕ ನೀರಿನ ಪೈಪ್‌ಲೈನ್‌ಗಳನ್ನು ಒಯ್ಯುವ ಬದಲು ಹಣ ಉಳಿಸಲು ಸೇತುವೆ ಮೇಲೆ ಹಾಕಿರುವುದು ಮತ್ತೊಂದು ಕಾರಣವಾಗಿದೆ. ಸಂಬಂಧ ಪಟ್ಟ ಇಲಾಖೆಯವರು, ಜನಪ್ರತಿನಿಧಿಗಳು ಸ್ವಲ್ಪ ಇತ್ತ ಕಡೆ ಗಮನ ಹರಿಸಿದರೆ ಇನ್ನು ಕೆಲ ಕಾಲ ಶತಮಾನಗಳ ನೆನಪಿನ ಕೊಂಡಿ ಇರುವ ಸೇತುವೆಯನ್ನು ಉಳಿಸಿಕೊಳ್ಳ ಬಹುದೇನೋ ಎಂದು ಮೆಹೆಂದಳೆ ಅಭಿಪ್ರಾಯಪಟ್ಟಿದ್ದಾರೆ.