ರಾಣೇಬೆನ್ನೂರು, ಮಾ.29- ತಾಲ್ಲೂಕಿನ 6 ಗ್ರಾಮ ಪಂಚಾಯಿತಿಗಳಿಗೆ ಇಂದು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಶಾಂತಿಯುತ ಚುನಾವಣೆ ನಡೆದಿದ್ದು, ಶೇ. 86.33 ರಷ್ಟು ಮತದಾನವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಮತಗಟ್ಟೆ ಕೇಂದ್ರದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಮತದಾನಕ್ಕೆ ತೆರಳುವ ಪೂರ್ವದಲ್ಲಿ ಪ್ರತಿಯೊಬ್ಬರಿಗೂ ಕೈಗಳಿಗೆ ಸ್ಯಾನಿಟೈಸರ್ ಹಾಕಿದ ನಂತರವೇ ಒಳಕ್ಕೆ ಕಳುಹಿಸಲಾಗುತ್ತಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತಗಟ್ಟೆಗಳ ನೂರು ಮೀಟರ್ ಹೊರಗೆ ನಿಂತು, ಕೊನೆ ಕ್ಷಣದಲ್ಲಿ ಮತದಾರರನ್ನು ಓಲೈಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗೆಯಿಂದಲೇ ಗ್ರಾಮೀಣ ಪ್ರದೇಶದ ಮತದಾರರು ಹೆಚ್ಚಿನ ಉತ್ಸಾಹದಿಂದ ತಮ್ಮ ಪ್ರತಿನಿಧಿಗಳ ಆಯ್ಕೆಗಾಗಿ ಮತಗಟ್ಟೆಗೆ ಆಗಮಿಸುತ್ತಿರುವುದು ಕಂಡುಬಂದಿತು. ತಹಸೀಲ್ದಾರ್ ಜಿ.ಎಸ್. ಶಂಕರ್ ನೇತೃತ್ವದಲ್ಲಿ ಚುನಾವಣಾಧಿಕಾರಿಗಳು ಮತಗಟ್ಟೆಗಳಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು.
November 15, 2024