ಬಾಳೆಹೊನ್ನೂರು, ಮಾ.28- ಶ್ರೀ ಜಗದ್ಗುರು ರಂಭಾಪುರಿ ಪೀಠದಿಂದ ನಿರ್ಮಿಸಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಶಿವಾಚಾರ್ಯ ಚೈತನ್ಯ ಧಾಮ ನೂತನ ಕಟ್ಟಡ ಉದ್ಘಾಟನೆಯನ್ನು ಶ್ರೀ ರಂಭಾಪುರಿ ಮತ್ತು ಶ್ರೀ ಕೇದಾರ ಜಗದ್ಗುರುಗಳು ಇತ್ತೀಚೆಗೆ ನೆರವೇರಿಸಿದರು.
ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ, ಕೈಗಾರಿಕಾ ತರಬೇತಿ ಕೇಂದ್ರವನ್ನು ಲಿಂ. ಶ್ರೀ ರಂಭಾಪುರಿ ವೀರ ರುದ್ರಮುನಿ ಜಗದ್ಗುರುಗಳವರು ಸಂಸ್ಥಾಪಿಸಿ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಬೆಳವಣಿಗೆಗೆ ಶ್ರಮಿಸಿದ್ದರು. ಹಳೆ ಕಟ್ಟಡವನ್ನು ತೆಗೆದು 2 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದರು.
ಮಠಾಧೀಶರಿಗೆ ತಂಗಲು ವಿಶೇಷ ಗಮನ ಹರಿಸಿ, ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಶಿವಾಚಾರ್ಯ ಚೈತನ್ಯ ಧಾಮ ನೂತನ ಕಟ್ಟಡವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದರು. ಶ್ರೀ ಕೇದಾರ ಭೀಮಾಶಂಕರ ಜಗದ್ಗುರುಗಳು ಪಾಲ್ಗೊಂಡು ಸಂದೇಶ ಅನುಗ್ರಹಿಸಿದರು.
ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಂ.ಎಸ್. ಚನ್ನಕೇಶವ, ಕಟ್ಟಡ ಗುತ್ತಿಗೆದಾರ ವೀರೇಶ್ ಪಾಟೀಲ, ಪ್ರಾಂಶುಪಾಲ ಹೆಚ್.ಆರ್. ಆನಂದ್ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.