ದಾವಣಗೆರೆ, ಮಾ. 28- ಬಿಸಿಲ ಬೇಗೆಗೆ ಬೆಂದಿದ್ದ ನಗರಕ್ಕೆ ಇಂದು ಸಂಜೆ ವರುಣ ತಂಪೆರೆದನು.
ಮಿಂಚು, ಸಿಡಿಲು, ಗುಡುಗಿನ ಆರ್ಭಟದೊಂ ದಿಗೆ ಅರ್ಧ ಗಂಟೆಗಳ ಕಾಲ ಜೋರಾಗಿ ಸುರಿದ ಮಳೆಯಿಂದಾಗಿ ಬಿಸಿಲಿನ ಜಳಕ್ಕೆ ಕೆಂಡಂತಾಗಿದ್ದ ವಾತಾವರಣ ತಂಪಾಯಿತು. ನಂತರ ಮಳೆ ಸಾಮಾನ್ಯವಾಗಿ ಬಂತು.
ಕಳೆದ ಕೆಲ ದಿನಗಳಿಂದಲೂ ನಗರದಲ್ಲಿ 37 ಡಿಗ್ರಿ ಸೆಲ್ಷಿಯಸ್ ತಾಪಮಾನವಿತ್ತು. ಮೊದಲಿಗೆ ಕಪ್ಪು ದಟ್ಟ ಮೋಡಗಳು ಆವರಿಸಿದ್ದರೂ ಜೋರು ಗಾಳಿ ಮಧ್ಯೆಯೇ ಮಳೆಯಾಯಿತು. ಏಕಾಏಕಿ ದಟ್ಟ ಮೋಡಗಳು ಆವರಿಸಿದ್ದವು. ತಂಪು ಗಾಳಿಗೆ, ಮಳೆಯ ಹನಿಗಳ ಸಿಂಚನದಿಂದ ಉರಿ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರು ನಿಟ್ಟಿಸಿರು ಬಿಟ್ಟರು.
ಬಾಳೆ ಬೆಳೆ ಹಾನಿ: ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಸಂಜೆ ಬಂದ ಭಾರೀ ಮಳೆ, ಗಾಳಿಯಿಂದಾಗಿ ಬಾಳೆ ತೋಟದಲ್ಲಿ ಬಾಳೆ ಗಿಡಗಳು ಮುರಿದು ಬಿದ್ದು ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತ ಮಾಳಗೇರ ಬಸವಂತಪ್ಪ ಅಳಲಿಟ್ಟಿದ್ದಾರೆ.