ಹೊನ್ನಾಳಿ, ಜೂ.27- ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ಆಕ್ಸಿಜನ್ ಪ್ಲಾಂಟ್ ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನಿನ್ನೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನೂತನ ಆಕ್ಸಿಜನ್ ಘಟಕದ ಉದ್ಘಾಟನೆಯನ್ನು ನಾಳೆ ದಿನಾಂಕ 28ರ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಕೆಎಸ್‍ಡಿಎಲ್ ನಿಗಮದ ರೂ.1 ಕೋಟಿಗಳ ಅನುದಾನದಲ್ಲಿ ಆಕ್ಸಿಜನ್ ಪ್ಲಾಂಟ್, ಜನರೇಟರ್ ನಿರ್ಮಾಣ ಕಾಮಗಾರಿ ಮುಕ್ತಾಯವಾಗಿದ್ದು, ಆಕ್ಸಿಜನ್ ಪ್ಲಾಂಟ್ ನಿನ್ನೆ ಸಂಜೆ ತರಲಾಗಿದೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಸರ್ಕಾರಿ ಆಸ್ಪತ್ರೆಗೆ 63 ಕೆವಿ ವಿದ್ಯುತ್ ವ್ಯವಸ್ಥೆಯಿದ್ದು, ಆಕ್ಸಿಜನ್ ಪ್ಲಾಂಟ್‌ಗೆ ಅವಶ್ಯವಿರುವ 150 ಕಿಲೋ ವ್ಯಾಟ್ ಆಂಪಿಯರ್ ವಿದ್ಯುತ್ ಸಂಪರ್ಕ ಕಲ್ಪಿಸಲು ಕೆಇಬಿ ಎಂಜಿನಿಯರ್‍ಗೆ ಸೂಚಿಸಲಾಗಿದೆ. ಆಕ್ಸಿಜನ್ ಪ್ಲಾಂಟ್ ಒಂದು ನಿಮಿಷಕ್ಕೆ 500 ಕೆ.ಎಲ್ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದು, ಇದರಿಂದ ಪದೇ ಪದೇ ಉಂಟಾಗುತ್ತಿದ್ದ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗಲಿದೆ ಎಂದು ಅವರು ಹೇಳಿದರು.
ಟ್ರೈಯಿನ್ ಕಂಪೆನಿಯ ಆಕ್ಸಿಜನ್ ಪ್ಲಾಂಟ್ ಟೆಕ್ನಿಕಲ್ ಎಂಜಿನಿಯರ್ ನಾಗೇಂದ್ರ ಪ್ರಸಾದ್ ಮಾತನಾಡಿ, ಆಕ್ಸಿಜನ್ ಪ್ಲಾಂಟ್ ನಿರ್ವಹಣೆಗಾಗಿ ಇಬ್ಬರು ವೈದ್ಯರು ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಿ, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ತಹಶೀಲ್ದಾರ್ ಬಸನಗೌಡ ಕೋಟೂರ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಚಂದ್ರಪ್ಪ, ಭೂಸೇನಾ ನಿಗಮದ ಕೆಂಚಪ್ಪ, ದಂತ ವೈದ್ಯೆ ಡಾ.ಲೀಲಾವತಿ, ಸಿಬ್ಬಂದಿ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.