ಕೂಡ್ಲಿಗಿ ತಾಲ್ಲೂಕು ಚಿರತಗುಂಡು ಗ್ರಾಮ
ಕೂಡ್ಲಿಗಿ,ಮಾ.22- ತಾಲ್ಲೂಕಿನ ಗುಡೇಕೋಟೆ ಹೋಬಳಿಯ ಚಿರತಗುಂಡು ಗ್ರಾಮದ ಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾಡಳಿತದ ನಿರ್ದೇಶನದಲ್ಲಿ ತಾಲ್ಲೂಕು ಆಡಳಿತದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜರುಗಿತು.
ಹೊಸಪೇಟೆ ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಅವರು ಶಾಲಾವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ತಹಶೀಲ್ದಾರ್ ಎಸ್.ಮಹಾಬಲೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಯಿತು.ಸಾರ್ವಜನಿಕರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ನಂತರ ಅಧಿಕಾರಿಗಳಿಂದ ಗಡ್ಡದ ಬೋರಯ್ಯನಹಟ್ಟಿ ಕಂದಾಯ ಗ್ರಾಮ ರಚನೆಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಲಾಯಿತು. ಮುಖ್ಯವಾಗಿ ಆಧಾರ್ ನೋಂದಣಿ ಹಾಗೂ ನವೀಕರಣ ಮತ್ತು ಪಡಿತರ ಚೀಟಿ ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಯಿತು.
ಮಧ್ಯಾಹ್ನದ ನಂತರ ಸಹಾಯಕ ಆಯುಕ್ತರು ಗ್ರಾಮವನ್ನು ಖುದ್ದು ಸಂಚರಿಸುವ ಮೂಲಕ ಗ್ರಾಮಸ್ಥರಿಂದ ಅಹವಾಲು ಆಲಿಸಿದರು. ದಲಿತರ ಪ್ರದೇಶದಲ್ಲಿ ಚಹಾ ಕೂಟದೊಂದಿಗೆ ಕುಂದು ಕೊರತೆಗಳನ್ನು ಪರಿಶೀಲಿಸಿದರು. ಸಂಜೆ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ಆಯುಕ್ತರು ವಿತರಿಸಿದರು.