ಮಲೇಬೆನ್ನೂರು, ಆ.5 – ಭಾರತೀಯ ಸೇನೆಯಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಪಡೆದು ಗುರುವಾರ ಸ್ವಗ್ರಾಮ ಭಾನುವಳ್ಳಿಗೆ ಆಗಮಿಸಿದ ವೀರ ಯೋಧ ಕೆ.ಎಸ್. ಬೀರಪ್ಪ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ಗ್ರಾಮದ ಮೆರವಣಿಗೆ ಮಾಡಿ, ನಂತರ ಗ್ರಾಮದ ಆರಾಧ್ಯ ದೈವ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಗ್ರಾಮಸ್ಥರು ಸನ್ಮಾನಿಸಿದರು.
ಈ ವೇಳೆ ಭಾನುವಳ್ಳಿ ನೌಕರರ ಸಂಘದ ಅಧ್ಯಕ್ಷ ಸಿ. ನಾಗರಾಜ್ ಮಾತನಾಡಿ, ಭಾನುವಳ್ಳಿ ಗ್ರಾಮದ 11 ಜನ ಯೋಧರು ದೇಶ ರಕ್ಷಣೆಯಲ್ಲಿರುವುದು ನಮ್ಮ ಗ್ರಾಮದ ಹೆಮ್ಮೆ ಎಂದು ಹೇಳಿದರು.
ಜಿ.ಪಂ. ಮಾಜಿ ಸದಸ್ಯರೂ, ವಕೀಲರೂ ಆದ ಎಂ. ನಾಗೇಂದ್ರಪ್ಪ ಅವರು ಬೀರಪ್ಪ ಅವರ ಸೇವೆಯನ್ನು ಪ್ರಶಂಸಿಸಿದರು. ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಸಂಘದ ಅಧ್ಯಕ್ಷ ಕೋಣನತಲೆ ಚಂದ್ರಪ್ಪ, ಕಾರ್ಯದರ್ಶಿ ಪರಮೇಶ್ವರಪ್ಪ, ಭಾನುವಳ್ಳಿ ಸೈನಿಕರ ಅಭಿಮಾನಿ ಬಳಗದ ಸದಸ್ಯರು, ನೌಕರರ ಸಂಘದ ಕಾರ್ಯದರ್ಶಿ ಡಿ.ಆರ್.ಪ್ರಕಾಶ್, ಖಜಾಂಚಿ ಶಿವರಾಜ್ ಸೇರಿದಂತೆ ಇನ್ನೂ ಅನೇಕರು ಹಾಜರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು.