ಪಟ್ಟಣ ಪಂಚಾಯ್ತಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಅನುಮೋದನೆ

ಜಗಳೂರು, ಮಾ.11-  ಸರ್ಕಾರದ ಮಾರ್ಗಸೂಚಿ ಅನ್ವಯ ಪಟ್ಟಣದಲ್ಲಿನ ವಾಸದ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಆಸ್ತಿ ತೆರಿಗೆ ಪರಿಷ್ಕರಿಸುವ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಯಿತು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ  ಪ.ಪಂ. ಅಧ್ಯಕ್ಷ ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ  ಮುಖ್ಯ ಅಧಿಕಾರಿ ರಾಜು ಬಣಕಾರ್ ಸರ್ಕಾರದ ಸುತ್ತೋಲೆಯ ಬಗ್ಗೆ ಮಾಹಿತಿ ನೀಡಿದರು. 

1957 ರ ಸೆಕ್ಷನ್ 45 ಬಿ ಅಡಿಯಲ್ಲಿ ಚಾಲ್ತಿ ಸಾಲಿನ ಮಾರುಕಟ್ಟೆ  ಮಾರ್ಗಸೂಚಿ ಬೆಲೆಯ ಶೇ.25 ರಷ್ಟು ಪರಿಗಣಿಸುವಂತೆ ಮತ್ತು ವಾಸದ ವಾಣಿಜ್ಯೇತರ  ಸ್ವತ್ತು ತೆರಿಗೆಯನ್ನು ಕಟ್ಟಡಗಳ  ಮೂಲ ಬೆಲೆಯ ಶೇ. 0.2 ಕ್ಕಿಂತ ಕಡಿಮೆ 1.5 ಹೆಚ್ಚಿಗೆ ಇಲ್ಲದಂತೆ ವಿಧಿಸುವುದು ಹಾಗೂ ತೆರಿಗೆಗೆ ಒಳಪಡುವ ಖಾಲಿ ಭೂಮಿಗೆ 0.2 ಕಡಿಮೆಯಿಲ್ಲದೆ 0.5 ರಷ್ಟು ಹೆಚ್ಚಿಲ್ಲ ದಂತೆ ನಿರ್ಧರಿಸುವುದು, ಬೇರೆ ಬೇರೆ ಪ್ರದೇಶದಲ್ಲಿನ ಬೇರೆ ಬೇರೆ ಭೂಮಿ‌ ವರ್ಗಗಳ ಮೇಲೆ ತೆರಿಗೆಯನ್ನು ಶೇ.3 ರಿಂದ ಶೇ. 5 ರಷ್ಟು ಹೆಚ್ಚಿಸುವುದು ಸೇರಿದಂತೆ  ಪರಿಷ್ಕೃತ ತೆರಿಗೆಯನ್ನು ಏಪ್ರಿಲ್ 1 ರಿಂದ ಪಾವತಿಸಿಕೊಳ್ಳುವಂತೆ  ಸರ್ವಾನುಮತದಿಂದ ಸಭೆಯಲ್ಲಿ  ನಿರ್ಧರಿಸಲಾಯಿತು.

ಸಭೆಯಲ್ಲಿ ಪ.ಪಂ.  ಉಪಾಧ್ಯಕ್ಷೆ ಲಲಿತ  ಶಿವಣ್ಣ, ಸದಸ್ಯರಾದ  ಪಾಪಲಿಂಗಪ್ಪ, ರೇವಣ್ಣ, ದೇವರಾಜ್, ನವೀನ್ ಕುಮಾರ್, ಮಂಜಣ್ಣ, ನಾಮನಿರ್ದೇಶಿತ ಸದಸ್ಯ ರುದ್ರಮುನಿ, ಕಂದಾಯ ನಿರೀಕ್ಷಕ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

error: Content is protected !!