ಕೊಟ್ಟ ಮಾತಿನಂತೆ ನಡೆದ ದರ್ಶನ್ ಕುದುರೆಯ ತಡಿ ನೀಡಿ, ಎಸ್ಸೆಸ್ಸೆಂ ಅವರಿಗೆ ಕೃತಜ್ಞತೆ

ದಾವಣಗೆರೆ, ಮಾ. 2 –  ಖಾಸಗಿ ವಾಹಿನಿಯ ಸಂದರ್ಶನದಲ್ಲಿ  ಇತ್ತೀಚಿಗೆ ಕೊಟ್ಟ ಮಾತಿನಂತೆ ನಡೆದ ಚಿತ್ರ ನಟ ದರ್ಶನ್ ಅವರು ಇಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಅವರಿಗೆ ಕುದುರೆಯ ತಡಿ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದರು.

ಹುಬ್ಬಳ್ಳಿಯಲ್ಲಿ ರಾಬರ್ಟ್‌​ ಸಿನಿಮಾದ ಪ್ರೀ ರಿಲೀಸಿಂಗ್‌​ ಇವೆಂಟ್‌​ ಮುಗಿಸಿದ ನಟ ದರ್ಶನ್‌​ ದಾವಣಗೆರೆಗೆ ಭೇಟಿ ನೀಡಿ ಮಲ್ಲಿಕಾರ್ಜುನ್‌ ಅವರ ಜೊತೆ ಸೌಹಾರ್ದ ಮಾತುಕತೆ ನಡೆಸಿದರು.

ಕಾಂಗ್ರೆಸ್ ನಾಯಕ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್​​ ಅವರ ಒಡೆತನದ ಬಾಪೂಜಿ ಅತಿಥಿ ಗೃಹಕ್ಕೆ  ತೆರಳಿದ ವೇಳೆ ನಟರಾದ ಚಿಕ್ಕಣ್ಣ, ವಿನೋದ್ ಪ್ರಭಾಕರ್, ರವಿಶಂಕರ್ ಕೂಡ ಜೊತೆಗಿದ್ದರು.

ಮೊದಲಿನಿಂದಲೂ ಎಸ್‌.ಎಸ್‌.ಮಲ್ಲಿಕಾರ್ಜುನ್‌​ಗೆ ನಟ ದರ್ಶನ್ ಆಪ್ತರಾಗಿದ್ದು, ಕಳೆದ ಬಾರಿ ದರ್ಶನ್‌ಗೆ ಮಲ್ಲಿಕಾರ್ಜುನ್‌​ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು.

ಅಮೆರಿಕಾದಿಂದ ತಂದ್ದಿದ ಕುದುರೆಯ ತಡಿ (ಜೀನ್)ಯನ್ನು ಉಡುಗೊರೆಯಾಗಿ ನೀಡಿದರು. ನಂತರ ಮಲ್ಲಿಕಾರ್ಜುನ್ ರವರ ಒಡೆತನದ ಮುದೋಳದ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ  ಹಂಗಾಮಿನಲ್ಲಿ 20 ಲಕ್ಷ ಟನ್ ಕಬ್ಬು ಅರೆದಿದ್ದು, ಮಲ್ಲಿಕಾರ್ಜುನ್‌ ಅವರನ್ನು ದರ್ಶನ್ ಅವರು ರೈತರ ಪರವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಜಿ.ಎಸ್.ಮಂಜುನಾಥ್ ಗಡಿಗುಡಾಳ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಬಿ.ಕೆ.ಪರಶುರಾಮ ಸೇರಿದಂತೆ ಮಲ್ಲಿಕಾರ್ಜುನ್‌ ಮತ್ತು ದರ್ಶನ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

error: Content is protected !!