ಮಲೇಬೆನ್ನೂರು ಫೆ.28 – ಕೊರೊನಾ ಕಾರಣ ಸ್ಥಗಿತವಾಗಿದ್ದ ತರಗತಿಯನ್ನು ಸರ್ಕಾರದ ಆದೇಶದಂತೆ ಪ್ರಾರಂಭಿಸಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಗುಚ್ಛ ಸಂಪನ್ಮೂಲ ವ್ಯಕ್ತಿ ಕೆ.ಆರ್ ಬಸವರಾಜಯ್ಯ ಕೋರಿದರು.
ಗೋವಿನಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ನಡೆದ ಪೋಷಕರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಈ ಭಾಗದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಶಾಲೆಗೆ ಬರುವ ಮುನ್ನ ಮಾಸ್ಕ್ ಧರಿಸುವುದು ಕಡ್ಡಾಯ. ಮಕ್ಕಳ ನಡುವೆ ಅಂತರ ಕಾಪಾಡಲಾಗುವುದು. ಶಾಲೆ ಆವರಣ ಸ್ಯಾನಿಟೈಸ್ ಮಾಡಿ ಸ್ವಚ್ಛತೆಗೆ ಒತ್ತು ನೀಡಲಾಗಿದೆ.
ಭಯ ಆತಂಕ ಬಿಟ್ಟು ಮಕ್ಕಳಿಗೆ ಬಿಸಿಯಾದ ಆಹಾರ ನೀಡಿ ಶಾಲೆಗೆ ಕಳುಹಿಸಿ. ಒಂದು ವೇಳೆ ಜ್ವರ ಶೀತ ಕೆಮ್ಮು ಕಂಡು ಬಂದರೆ ವೈದ್ಯರ ಸಲಹೆ ಪಡೆಯಿರಿ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್. ಸಿದ್ದಪ್ಪ ಮಾತನಾಡಿ, ಶಾಲಾರಂಭವಾಗಿದೆ. ಎಸ್.ಡಿ. ಎಂ.ಸಿ. ಸದಸ್ಯರು ಪೋಷಕರ ಮನವೊಲಿಸಿ ಮಕ್ಕಳನ್ನು ಕರೆತನ್ನಿ ಎಂದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗರಾಜ್ ಮಾತನಾಡಿ, ಶಾಲಾರಂಭವಾಗಿರುವುದು ಉತ್ತಮ ನಿರ್ಧಾರ, ಮಕ್ಕಳನ್ನು ಕರೆತಂದು ಸಹಕಾರ ನೀಡುವ ಭರವಸೆ ನೀಡಿದರು. ಮುಖಂಡ ಲಿಂಗನಗೌಡ, ಸದಸ್ಯರು, ಶಾಲಾ ಸಿಬ್ಬಂದಿ, ಪೋಷಕರು, ಮಕ್ಕಳು ಇದ್ದರು.