ಜಗಳೂರು, ಫೆ.22- ನಾಡಿದ್ದು ದಿನಾಂಕ 24 ರಂದು ಜೆ.ಎಂ ಇಮಾಂ ಸ್ಮಾರಕ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಇಮಾಂ ಟ್ರಸ್ಟ್ ಅಧ್ಯಕ್ಷ ಜೆ.ಕೆ.ಹುಸೇನ್ ಮಿಯಾ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಇಮಾಂ ಟ್ರಸ್ಟ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ದಿ. ಜೆ ಎಂ.ಇಮಾಂ ಸಾಹೇಬರು ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದಲ್ಲಿ ರೈಲ್ವೆ, ಶಿಕ್ಷಣ, ಲೊಕೋಪಯೋಗಿ ಇಲಾಖೆಗಳ ಮಂತ್ರಿಯಾಗಿ. ಸ್ವಾತಂತ್ರ್ಯಾ ನಂತರ ಶಾಸನ ಸಭೆಯಲ್ಲಿ ಸತತ 4 ಜನ ಮುಖ್ಯಮಂತ್ರಿಗಳ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. 1971 ಹಾಗೂ 1991 ರಲ್ಲಿ ಎರಡು ಬಾರಿ ಲೋಕಸಭಾ ಸದಸ್ಯರಾಗಿ ಜಗಳೂರು ನಾಡಿನ ಹೆಮ್ಮೆ ಯ ಪ್ರಾಮಾಣಿಕ ರಾಜಕಾರಣಿಯಾಗಿ ಸೇವೆಗೈದು ನೂರಾರು ರಸ್ತೆ, ಕೆರೆಗಳನ್ನು ನಿರ್ಮಿಸಿದ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ ಎಂದು ಹೇಳಿದರು.
ಇಮಾಂ ಟ್ರಸ್ಟ್ ಮೂಲಕ ಇಮಾಂ ಶಾಲೆ ತಾಲ್ಲೂಕಿನಲ್ಲಿ ತನ್ನದೇ ಆದ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದು, ಇಮಾಂ ಸಾಹೇಬರ ಹೆಸರು ಜನರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಪ್ರತಿವರ್ಷ ಕೃಷಿ, ಶಿಕ್ಷಣ, ರಾಜಕೀಯ, ಕಲೆ ಸೇರಿದಂತೆ 6 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ, ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. 2021 ನೇ ಸಾಲಿಗೆ ಜಾನಪದ ತಜ್ಞ, ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಈಶ್ವರಪ್ಪನವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.
ನಿ.ಲೀಡ್ ಬ್ಯಾಂಕ್ ಮ್ಯಾನೇಜರ್ ಎನ್.ಟಿ.ಎರಿಸ್ವಾಮಿ, ಡಿ.ಸಿ.ಮಲ್ಲಿಕಾರ್ಜುನ್, ಬಸವೇಶ್, ಸಿಎಂ ಹೊಳೆ ಉಪಸ್ಥಿತರಿದ್ದರು.