ಹರಪನಹಳ್ಳಿ, ಫೆ.21 – ತೆಗ್ಗಿನಮಠ ಸಂಸ್ಥೆಯಲ್ಲಿ ಶಿಕ್ಷಣ ಕಲಿತ ಸಾವಿರಾರು ಜನರು ಸರ್ಕಾರಿ ನೌಕರಿ ಪಡೆದು ಕೊಂಡು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ ಎಂದು ತೆಗ್ಗಿನಮಠ ಸಂಸ್ಥೆಯ ಟಿ.ಸಿ.ಎಚ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕ ಚಂದ್ರಶೇಖರಪ್ಪ ಹೇಳಿದರು.
ಪಟ್ಟಣದ ತೆಗ್ಗಿನಮಠ ಸಂಸ್ಥೆಯ ಟಿ.ಸಿ.ಎಚ್ ಕಾಲೇಜಿನಲ್ಲಿ 1997-98 ನೇ ಸಾಲಿನ ಟಿ.ಸಿ.ಎಚ್ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಈಗಿನ ವಿದ್ಯಾರ್ಥಿಗಳು ಸದಾ ವ್ಯಾಟ್ಸಾಪ್, ಫೇಸ್ ಬುಕ್‍ನಲ್ಲಿ ಮಗ್ನರಾಗಿರುತ್ತಾರೆ. ಅಂತದರಲ್ಲಿ ಕಳೆದ 21 ವರ್ಷಗಳ ನಂತರ ಹಳೆಯ ವಿದ್ಯಾರ್ಥಿಗಳು ನಮ್ಮನ್ನು ಕರೆಯಿಸಿ ಸತ್ಕರಿಸಿ ನಮ್ಮ ಜವಾಬ್ದಾರಿ ಜಾಸ್ತಿ ಮಾಡಿದ್ದೀರಿ. ನಿಮ್ಮ ತರಹ ಈಗಿನ ವಿದ್ಯಾರ್ಥಿಗಳಿಗೆ ನಿಮ್ಮ ಮಾರ್ಗದರ್ಶನ ಸಲಹೆ ಹೀಗೆ ಇರಲಿ ಎಂದರು.
ಮುಖ್ಯ ಶಿಕ್ಷಕ ಬಿ.ಜೆ. ಕಂಪ್ಲೇಶ್ ಮಾತನಾಡಿ ಕಳೆದ 2 ದಶಕಗಳ ಹಿಂದೆ ನಾವು ವ್ಯಾಸಂಗ ಮಾಡಿ ಈಗ ಉದ್ಯೋಗದಲ್ಲಿದ್ದೇವೆ. ಅವೊತ್ತಿನ ನೆನಪುಗಳು ಗುರುಗಳ ಮಾರ್ಗದರ್ಶನ ನಮಗೆ ದಾರಿ ದೀಪ ವಾಗಿದ್ದು ಗುರಿ ಮತ್ತು ಸಾಧನೆಗೆ ಗುರುಗಳ ಆಶೀ ರ್ವಾದ ನಮ್ಮ ಮೇಲೆ ಸದಾ ಹೀಗೆ ಇರಲಿ ಎಂದರು.
ಕುರುಗೋಡಿನ ಶಿಕ್ಷಕ ನಾಗರಾಜ್ ಮಾತನಾಡಿ ಪ್ರಪಂಚದಲ್ಲಿ ಗುರು ಪರಂಪರೆಯನ್ನು ಹೊಂದಿದ ದೇಶ ಭಾರತವಾಗಿದ್ದು ಶ್ರದ್ದೆ, ನಿಷ್ಠೆ, ಗುರಿ ಇದ್ದರೆ ಸಾಧನೆಗೆ ಕಷ್ಟವಾಗವುದಿಲ್ಲ ಎಂದ ಅವರು ವಿದ್ಯಾರ್ಥಿ ದೆಸೆಯಲ್ಲಿನ ನಮ್ಮ ನೆನಪುಗಳು ಸದಾ ಹೀಗೆ ಇರಲು ಇಂತಹ ಕಾರ್ಯಕ್ರಮಗಳು ಆಗುತ್ತಿರಬೇಕು ನಮ್ಮ ಸಹಕಾರ ಯಾವಾಗಲೂ ಇದೆ ಎಂದರು.
ಉಪನ್ಯಾಸಕ ಪ್ರಸಾದಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಸಹಕಾರ ಇಲಾಖೆಯ ಲಿಂಗನಗೌಡ, ಶಿವಕುಮಾರ್, ಹಿರೇಮಠ್, ಇಟ್ಟಿಗಿ ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.