`ರಾಣೇಬೆನ್ನೂರು ಹುಲಿ’ ಸಾವು

ರಾಣೇಬೆನ್ನೂರು, ಫೆ. 9- ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಕಳೆದ  17 ವರ್ಷಗಳಿಂದ ಪ್ರಥಮ ಸ್ಥಾನ ಪಡೆಯುತ್ತಿದ್ದ “ರಾಣೇಬೆನ್ನೂರಿನ ಹುಲಿ” ಎಂದೇ ಖ್ಯಾತವಾಗಿದ್ದ ಹೋರಿ ಅನಾರೋಗ್ಯದಿಂದ ಇಂದು ಸಾವನ್ನಪ್ಪಿದ್ದು ಮಾಲೀಕರ ಗುಡ್ಡದ ಅನ್ವೇರಿ ಹೊಲದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

ರಾಜ್ಯ, ಹೊರರಾಜ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಿ 25 ತೊಲ ಬಂಗಾರ, 17 ಮೋಟಾರ್ ಬೈಕ್, 2 ಎತ್ತಿನ ಬಂಡಿ, 10 ಫ್ರಿಜ್, 10 ಟಿವಿ, 25 ಗಾಡ್ರೇಜ್ ಬೀರು ಹಾಗೂ 1 ಕೆ.ಜಿ. ಬೆಳ್ಳಿ ಮುಂತಾದ ಬಹುಮಾನಗಳನ್ನು ಗೆದ್ದು, ಅಷ್ಟೇ ಅಲ್ಲದೆ  ತಮಿಳುನಾಡಿನ ಸ್ಪರ್ಧೆಯಲ್ಲಿ “ಕರ್ನಾಟಕ ಕೇಸರಿ” ಬಿರುದು ಗಳಿಸಿಕೊಂಡಿದ್ದ ಈ ಹೋರಿ ಅಪಾರ ಅಭಿಮಾನಿಗಳನ್ನು ಹೊಂದಿತ್ತು. ಜಾಲ ತಾಣಗಳಲ್ಲಿ ಅಭಿಮಾನಿಗಳಿಂದ ವಿಶೇಷ ಹಾಡುಗಳು ಸೃಷ್ಟಿಯಾಗಿದ್ದವು.

20 ವರ್ಷಗಳ ಹಿಂದೆ ನಗರದ ಕುರುಬಗೇರಿಯ ದೇವ ಮರಿಯಪ್ಪ ಗುದುಗೇರ ಅವರು 62  ಸಾವಿರ. ರೂ ಗಳನ್ನು ಕೊಟ್ಟು ತಮಿಳುನಾಡಿನಿಂದ ತಂದಿದ್ದ ಈ ಹೋರಿಯ ಸಾಧನೆ ಗಮನಿಸಿದ ತಮಿಳುನಾಡಿನ ಅಭಿಮಾನಿಯೋರ್ವರು 1.5 ಕೋಟಿ ರೂ.ಹಣ‌, 5 ಎಕರೆ  ಹೊಲ ಕೊಡುವುದಾಗಿ ಹೇಳಿ ಹೋರಿಯನ್ನು ಮಾರಾಟ ಮಾಡುವಂತೆ ಬೇಡಿಕೆ ಇಟ್ಟಿದ್ದರು.

ಇತ್ತೀಚೆಗೆ ಸಾಗರ ತಾಲ್ಲೂಕಿನ ಚಿಕ್ಕಚೌಟಿಯಲ್ಲಿ ನಡೆದ ಸ್ಪರ್ಧೆಯ ನಂತರ ಹೋರಿ ಜ್ವರದಿಂದ ಬಳಲುತ್ತಿತ್ತು. ಹೋರಿಯ ಪಾರ್ಥಿವ ಶರೀರವನ್ನು ಗುದಿಗೇರ ಕುಟುಂಬ ಹಾಗೂ ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಹಾಗೂ ಅಭಿಮಾನಿಗಳು ನಗರದಾದ್ಯಂತ ಮೆರವಣಿಗೆ ಮೂಲಕ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದರು.

error: Content is protected !!