ಹರಪನಹಳ್ಳಿ, ಫೆ.6 – ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರನ್ನು ಬೆಂಬಲಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ಪದಾಧಿಕಾರಿಗಳು ಪಟ್ಟಣದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಸಂಘಟನೆಯ ಮುಖಂಡ ಹೊಸಹಳ್ಳಿ ಮಲ್ಲೇಶ್ ಮಾತನಾಡಿ ಕೇಂದ್ರ ಜಾರಿ ಮಾಡಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ವಿವಿಧ ಮಾರ್ಗಗಳನ್ನು ಅನುಸರಿಸುತ್ತಿರು ವುದನ್ನು ವಿರೋಧಿಸಿ ಖಂಡಿಸುತ್ತೇವೆ. ನರೇಂದ್ರ ಮೋದಿ ಸರ್ಕಾರ ಅನ್ನದಾತರ ಹೋರಾಟವನ್ನು ಕೊನೆಗೊಳಿಸಲು ರಸ್ತೆಗಳಿಗೆ ಮೊಳೆ ಹೊಡೆದು ನಿರ್ಬಂಧ ವಿಧಿಸುತ್ತಿರುವುದು ನಾಚಿಕೆಗೇಡಿತನ. ರೈತ ಹೋರಾಟಗಾರರನ್ನು ಭ್ರಷ್ಟರು ಖಲಿಸ್ತಾನಿಗಳು ಎಂದು ಹೇಳಿಕೆ ನೀಡುತ್ತಿರುವ ರಾಜ್ಯ ಸರ್ಕಾರದ ಕೃಷಿ ಸಚಿವರನ್ನು ವಜಾಗೊಳಿಸಬೇಕು. ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದು ಆಗ್ರಹಿಸಿದರು.
ಮುಖಂಡರಾದ ಗುಡಿಹಳ್ಳಿ ಹಾಲೇಶ್, ಇದ್ಲಿ ರಾಮಪ್ಪ, ಸಂದೇರ ಪರಶುರಾಮ, ಆರ್.ಗೋಣೆಪ್ಪ, ಗೌರಿಹಳ್ಳಿ ಹನುಮಂತಪ್ಪ, ಶಫಿವುಲ್ ಕುಂಚೂರು, ಟಿ.ಬಸಪ್ಪ, ಬಿ.ಹನುಮಂತಪ್ಪ ಹಾಗೂ ಮತ್ತಿತರರಿದ್ದರು.