ಕೂಡ್ಲಿಗಿಯಲ್ಲಿ ಸಾರಿಗೆ ನೌಕರರ ಮುಷ್ಕರ : ಕೆಲವೇ ಬಸ್ಸುಗಳ ಓಡಾಟ

ಕೂಡ್ಲಿಗಿ, ಏ.7-  ಸಾರಿಗೆ ಸಂಸ್ಥೆ ನೌಕರರು 6ನೇ ವೇತನ ಮಂಜೂರು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ,  ಬುಧವಾರ  ರಾಜ್ಯಾದ್ಯಂತ  ನಡೆಸುತ್ತಿರುವ ಮುಷ್ಕರದಿಂದಾಗಿ ಕೂಡ್ಲಿಗಿಗೂ ಬಿಸಿ ಮುಟ್ಟಿತು.

ಸಾರಿಗೆ ಸಂಸ್ಥೆ ಅಧಿಕಾರಿಗಳ ಒತ್ತಾಯದ ಮೇರೆಗೆ  ಕೆಲವು ಬಸ್ಸುಗಳು ಕೂಡ್ಲಿಗಿ  ನಿಲ್ದಾಣದಲ್ಲಿ ನಿಂತಿದ್ದರೂ  ಪ್ರಯಾಣಿಕರು ಇಲ್ಲದೇ  ಖಾಲಿ ಬಸ್ಸುಗಳನ್ನು ಓಡಿಸಲು ಮುಂದಾಗಿರುವುದು ಕಂಡು ಬಂದಿತು. ಬೆಳಿಗ್ಗೆ 10 ಗಂಟೆಯೊಳಗೆ 10 ಸಾರಿಗೆ ಸಂಸ್ಥೆ ಬಸ್‌ಗಳನ್ನು ನಂತರ ಮಧ್ಯಾಹ್ನದೊಳಗೆ ಪುನಃ 10 ಬಸ್‌ಗಳನ್ನು ಓಡಿಸಲಾಯಿತು. ಬೆಂಗಳೂರು, ಕೊಟ್ಟೂರು, ಹರಪನಹಳ್ಳಿ  ಹೊಸಪೇಟೆಗೆ, ಹಗರಿಬೊಮ್ಮನಹಳ್ಳಿ ಸೇರಿದಂತೆ ವಿವಿಧ ಮಾರ್ಗಗಳ ಕಡೆಗೆ ಬಸ್‌ಗಳನ್ನು ಓಡಿಸಲಾಯಿತು.  

ಬಸ್ ನಿಲ್ದಾಣದ ಹೊರಗಡೆ ಇರುವ ಖಾಸಗಿ ವಾಹನಗಳು ಎತ್ತ ಕಡೆ ಎಷ್ಟು  ವಾಹನಗಳು ಹೋಗುತ್ತವೆ ಎನ್ನುವ ಮಾಹಿತಿಯನ್ನು ಸಾರಿಗೆ ಸಂಸ್ಥೆ ಸಿಬ್ಬಂದಿ ಕಲೆ ಹಾಕಿ ಮೇಲಾಧಿಕಾರಿಗಳ ಗಮನಕ್ಕೆ ತಂದರು.   ಬಸ್ಸುಗಳನ್ನು ಓಡಿಸಿ ಜನರಿಗೆ ಅನುಕೂಲ ಮಾಡಬೇಕು ಎಂದು ಮನೆ ಮನೆಗೆ ತೆರಳಿ ಚಾಲಕ, ನಿರ್ವಾಹಕರನ್ನು ಕರೆ ತರುವ ಸಾಹಸ ಮಾಡಲು ಮುಂದಾದ ಸಿಬ್ಬಂದಿಗಳು, ಬಂದ ದಾರಿಗೆ ಸುಂಕವಿಲ್ಲ  ಎಂದುಕೊಂಡು ವಾಪಸ್ ಬಂದರು.  ಕೈಗೆ ಸಿಕ್ಕ ಕೆಲವು ಚಾಲಕರು, ನಿರ್ವಾಹಕರನ್ನು  ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದು ಬಸ್ಸು ಓಡಾಟಕ್ಕೆ ಮುಂದಾದ ಘಟನೆಯೂ ನಡೆಯಿತು.       

error: Content is protected !!