ಹರಪನಹಳ್ಳಿ, ಏ.7- ಸರ್ಕಾರದ ವಿರುದ್ಧ ಸಾರಿಗೆ ನೌಕರರು ಇಂದು ರಾಜ್ಯಾದ್ಯಂತ ಕರೆ ನೀಡಿದ್ದ ಮುಷ್ಕರದಿಂದ ತಾಲ್ಲೂಕು ಹಾಗೂ ಪಟ್ಟಣದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಬಸ್ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಪಿ.ಯು. ವಿದ್ಯಾರ್ಥಿಗಳ ಪ್ರಥಮ ಕಿರು ಪರೀಕ್ಷೆಗೆ ಬಹುತೇಕ ವಿದ್ಯಾರ್ಥಿಗಳು ಗೈರಾಗಿದ್ದರು. ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಮುಷ್ಕರದಿಂದಾಗಿ ಲಾಭ ಪಡೆದ ಖಾಸಗಿ ವಾಹನಗಳು ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ದುಪ್ಪಟ್ಟು ಹಣ ಪಡೆಯಲು ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿತ್ತು.
ಇಂದು ಡಿಪೋದಿಂದ ಯಾವುದೇ ಬಸ್ ರಸ್ತೆಗೆ ಇಳಿಯಲಿಲ್ಲ. ಆದರೆ, ಮಂಗಳವಾರ ಕರ್ತವ್ಯಕ್ಕೆ ತೆರಳಿದ್ದ 15 ಬಸ್ಗಳನ್ನು ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ಡಿವೈಎಸ್ಪಿ ಹಾಲಮೂರ್ತಿ ರಾವ್, ಸಿಪಿಐ ನಾಗರಾಜ ಕಮ್ಮಾರ್, ಪಿಎಸ್ಐ ಸಿ. ಪ್ರಕಾಶ ಹಾಗೂ ಹೊಸಪೇಟೆ ವಿಭಾಗೀಯ ತಾಂತ್ರಿಕ ಶಿಲ್ಪಿ ಅಲ್ತಾಫ್ ಹುಸೇನ್, ಡಿಪೋ ವ್ಯವಸ್ಥಾಪಕ ವಿನಾಯಕ ಸಾಲಿಮಠ್ ಅವರು ಚಾಲಕ ಮತ್ತು ನಿರ್ವಾಹಕರನ್ನು ಮನವೂಲಿಸಿ ಕರ್ತವ್ಯಕ್ಕೆ ತೆರಳುವಂತೆ ಮನವಿ ಮಾಡಿದರು.