ಬೆಂಗಳೂರು, ಫೆ.5 – ಹರಿಹರ ತಾಲ್ಲೂಕಿನ ಮಲೇಬೆನ್ನೂರು ನಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಭದ್ರಾ ನಾಲಾ ನಂ-3 ವಿಭಾಗದ ಕಾರ್ಯಪಾಲಕ ಅಭಿಯಂತರರ ಕಛೇರಿಯನ್ನು ಯಾವುದೇ ಕಾರಣಕ್ಕೂ ಹೊನ್ನಾಳಿಗೆ ವರ್ಗಾವಣೆ ಮಾಡಬೇಡಿ ಎಂದು ಶಾಸಕ ಎಸ್.ರಾಮಪ್ಪ ಅವರು ಶುಕ್ರವಾರ ಬೆಂಗಳೂರಿನಲ್ಲಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಪತ್ರ ನೀಡಿದರು.
ಬಸವಾಪಟ್ಟಣ ಉಪ ವಿಭಾಗೀಯ ಕಛೇರಿಯನ್ನು ಸಾಸ್ವೆಹಳ್ಳಿ ಉಪವಿಭಾಗಕ್ಕೆ ವಿಲೀನಗೊಳಿಸುವ ವಿಷಯವನ್ನು ತಕ್ಷಣವೇ ಕೈ ಬಿಡಬೇಕು. ಇಇ ಕಛೇರಿಯನ್ನು ಬೇರೆಡೆಗೆ ವರ್ಗಾಯಿಸುವುದರಿಂದ ಮತ್ತು ಬಸವಾಪಟ್ಟಣ ಎಇಇ ಕಛೇರಿಯನ್ನು ಸಾಸ್ವೆಹಳ್ಳಿಗೆ ಸೇರಿಸುದರಿಂದ ಕೊನೆ ಭಾಗದ ರೈತರಿಗೆ ಬಹಳ ತೊಂದರೆ ಆಗುತ್ತದೆ ಎಂಬ ವಿಷಯವನ್ನು ಶಾಸಕ ರಾಮಪ್ಪ ಅವರು ನೀರಾವರಿ ನಿಗಮದ ಎಂಡಿ ಮಲ್ಲಿಕಾರ್ಜುನ್ ಗುಗ್ಗೆ ಅವರಿಗೆ ತಿಳಿಸಿ ಕೊಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಎಂಡಿ ಅವರು ಇಂತಹ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸ್ಥಳೀಯ ಅಭಿಪ್ರಾಯ ಪಡೆಯುತ್ತೇವೆ. ಈ ವಿಷಯ ಕುರಿತು ಕೂಡಲೇ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಶಾಸಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.