ದಾವಣಗೆರೆ, ಫೆ.3- ಖಾಸಗಿ ದೇವಾಲಯಗಳಲ್ಲಿ ಹಾಗೂ ಪೌರೋಹಿತ್ಯ ನಡೆಸುವ ವೃತ್ತಿಪರ ಪುರೋಹಿತರು ಮತ್ತು ಅರ್ಚಕರನ್ನು ಅಸಂಘಟಿತ ಕಾರ್ಮಿಕರೆಂದು ಘೋಷಿಸಿ, ಸರ್ಕಾರದ ಅಧಿಕೃತ ಗುರುತಿನ ಚೀಟಿ ನೀಡಿ ಸರ್ಕಾರಿ ಸೌಲಭ್ಯಗಳನ್ನು ದೊರಕಿಸುವಂತೆ ಆಗ್ರಹಿಸಿ ನಗರದಲ್ಲಿ ಇಂದು ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ಎಂ.ಬಿ. ಅನಂತಮೂರ್ತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಸಮಿತಿ ಪದಾಧಿಕಾರಿಗಳು, ಬೇಡಿಕೆಗಳುಳ್ಳ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಆರ್. ವರದರಾಜ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ನಾಗೇಂದ್ರಕುಮಾರ್, ರಾಜ್ಯ ಗೌರವಾಧ್ಯಕ್ಷ ಪ್ರಭುಮೂರ್ತಿ, ರಾಜ್ಯ ಉಪಾಧ್ಯಕ್ಷರಾದ ಡಿ.ಎಸ್. ರಾಜೇಶ್, ಎಸ್. ನಾಗೇಶ್, ಜಿಲ್ಲಾಧ್ಯಕ್ಷ ಎಸ್.ಎ. ಆಂಜನೇಯ, ಉಪಾಧ್ಯಕ್ಷ ಎಂ.ಡಿ. ಮುರುಳೀಧರರಾವ್, ಕಾರ್ಯದರ್ಶಿ ಆರ್.ಬಿ. ನಾಗರಾಜ್, ಸಹ ಕಾರ್ಯದರ್ಶಿ ಎಸ್.ಎ. ವಿನಯ್, ಖಜಾಂಚಿ ರಂಗನಾಥ್ ಭಾರಧ್ವಜ್, ಸದಸ್ಯರಾದ ಎಸ್. ನಾಗರಾಜ್, ಕೆ.ವಿ. ಅಮರನಾಥ್, ನಾಗೇಶ್ ಭಟ್, ಯೋಗ ನರಸಿಂಹಮೂರ್ತಿ ಸೇರಿದಂತೆ ಇತರರು ಇದ್ದರು.