ಜಗಳೂರು, ಜ.7 – ಆಧುನಿಕ ತಂತ್ರಜ್ಞಾನ ಯುಗದ ಲ್ಲಿಯೂ ಬಾಲ್ಯವಿವಾಹ, ಕಂದಾಚಾರ, ಮೂಢನಂಬಿಕೆಗಳಂತಹ ಸಾಮಾಜಿಕ ಪಿಡುಗುಗಳು ಮಹಿಳೆಯರ ಗೌರವಯುತ ಬದುಕಿಗೆ ಕಳಂಕವಾಗಿವೆ ಎಂದು ಜಿ.ಪಂ ಅಧ್ಯಕ್ಷೆ ಶಾಂತಕುಮಾರಿ ತಿಳಿಸಿದರು. ತಾಲ್ಲೂಕಿನ ರಸ್ತೆ ಮಾಕುಂಟೆ ಗೊಲ್ಲರಹಟ್ಟಿಯಲ್ಲಿ ತಾಲ್ಲೂಕು ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಬಿಸಿಎಂ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಇಂದು ಮಹಿಳೆಯರ ಸಾಧನೆಗೆ ಶಿಕ್ಷಣ ಅಡಿಗಲ್ಲಾಗಿದ್ದು ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉಜ್ವಲ ಭವಿಷ್ಯ ರೂಪಿಸಿದರೆ ಸಾಮಾಜಿಕ ಅನಿಷ್ಠ ಪದ್ದತಿಗಳು ದೂರಾಗಲಿವೆ ಎಂದರು. ಅಲೆಮಾರಿ, ಬುಡಕಟ್ಟು ಸಮುದಾಯಗಳ ಮಹಿಳೆಯರಿಗೆ ಶಿಕ್ಷಣದ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಎಸ್ಎಫ್ಐ ಮುಖಂಡ ಮಹಾಲಿಂಗಪ್ಪ ಹೆಚ್.ಎಂ.ಹೊಳೆ ಮೂಢನಂಬಿಕೆಗಳು ಮತ್ತು ಮಹಿಳಾ ಶಿಕ್ಷಣ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ವೆಂಕಟೇಶ್ ಮೂರ್ತಿ, ಸಿಡಿಪಿಓ ಬೀರೇಂದ್ರ ಕುಮಾರ್, ನಜ್ಮಾಬಾನು, ನಿಲಯ ಮೇಲ್ವಿಚಾರಕರಾದ ನೇತ್ರಾವತಿ, ದೇವೇಂದ್ರಪ್ಪ, ನಾಗರಾಜ್ ಗ್ರಾ.ಪಂ ಸದಸ್ಯ ಚಿತ್ತಪ್ಪ, ಕೃಷ್ಣಪ್ಪ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
February 6, 2025