ದಾವಣಗೆರೆ, ಜ.2- ಹೈದರಾಬಾದ್ನಲ್ಲಿರುವ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾ ನಿಲಯದ ಎನ್.ಎ.ಎಲ್.ಎಸ್.ಎ.ಆರ್. (ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರೀಸರ್ಚ್) ಈ ಕೋರ್ಸ್ನ ಅಂತಿಮ ಪರೀಕ್ಷೆಯಲ್ಲಿ ನಗರದ ಸುನೇಹಾ ಕಾಸಲ್, ತನ್ನ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ನಾಲ್ಕು ಸ್ವರ್ಣ ಪದಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ. ರಮಣ ಅವರು ಈ ಪದಕಗಳನ್ನು ಈ ವಿದ್ಯಾರ್ಥಿನಿಗೆ ಪ್ರದಾನ ಮಾಡಿದರು. ಸುನೇಹಾ, ನಗರದ ಕಾಸಲ್ ಅರುಣ್ಕುಮಾರ್ ಮತ್ತು ಪದ್ಮಾ ಅರುಣ್ಕುಮಾರ್ ಅವರ ದ್ವಿತೀಯ ಪುತ್ರಿ. ತನ್ನ ಪದವಿಪೂರ್ವ ಹಂತದವರೆಗಿನ ಶಿಕ್ಷಣವನ್ನು ದಾವಣಗೆರೆಯಲ್ಲಿಯೇ ಪಡೆದಿದ್ದ ಈಕೆ, ರಾಷ್ಟ್ರಮಟ್ಟದ ಸ್ಪರ್ಧಾ ಪರೀಕ್ಷೆ ಕ್ಲ್ಯಾಟ್ನಲ್ಲಿ ಅತ್ಯುತ್ತಮ ಸಾಧನೆ ಮಾಡಿ, ಈ ವಿದ್ಯಾನಿಲಯದಲ್ಲಿ ಪ್ರವೇಶ ಪಡೆದಿದ್ದಳು.
ಅಂತರರಾಷ್ಟ್ರೀಯ ಮಾನ್ಯತೆ ಇರುವ ಈ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯುವುದೇ ಒಂದು ಸಾಧನೆ ಎಂದು ಪರಿಗಣಿಸಲಾಗುತ್ತಿದೆ. ಅಂತಹದರಲ್ಲಿ ಅಲ್ಲಿಯ ಅಂತಿಮ ಪರೀಕ್ಷೆಯಲ್ಲಿ ನಾಲ್ಕು ಸ್ವರ್ಣ ಪದಕಗಳನ್ನು ಪಡೆದಿರುವ ಇವರ ಸಾಧನೆಯ ಬಗ್ಗೆ ಶ್ರೀಮತಿ ಸುಜಾತಾ ಕೃಷ್ಣ, ಕಾಸಲ್ ರಾಧಾಕೃಷ್ಣ ಗುಪ್ತ ಮತ್ತು ಇಡೀ ಕಾಸಲ್ ಮನೆತನದವರು ಅಭಿನಂದಿಸಿದ್ದಾರೆ.