ಜಗಳೂರು, ಫೆ. 16- ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಗ್ರಾಮಾ ಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಎಚ್. ಅರುಣ್ ಕುಮಾರ್ ಮಾತನಾಡಿ, 2024 ಸೆ.26 ರಿಂದ ಅಕ್ಟೋಬರ್ 3 ರವರೆಗೆ ನಡೆದ ರಾಜ್ಯವ್ಯಾಪಿ ಮುಷ್ಕರದಂದು ನಡೆಸಲಾಗಿದ್ದ ಪ್ರತಿಭಟನೆಯಲ್ಲಿ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಭರವಸೆಯಂತೆ ಪ್ರತಿಭಟನೆ ಹಿಂಪಡೆಯಲಾಗಿತ್ತು. ಈ ವೃಂದದ ನೌಕರರ ಬೇಡಿಕೆ ಈವರೆಗೂ ಈಡೇರಿಸಿಲ್ಲ. ಅಲ್ಲದೆ ಪ್ರತಿಭಟನೆ ಪೂರ್ವಕ್ಕಿಂತಲೂ ಅಧಿಕ ಕಾರ್ಯಭಾರದ ಒತ್ತಡ ಉಂಟಾಗಿದೆ. ಕೂಡಲೇ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು. ನೌಕರರ ಕೌಟುಂಬಿಕ ಸಮಸ್ಯೆ, ಕಛೇರಿಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಅನುಕಂಪದ ನೇಮಕಾತಿ ವೃಂದ ಮತ್ತು ನೇಮಕಾತಿ ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿನಾಯಕ, ಪದಾಧಿಕಾರಿಗಳಾದ ಮಹೇಶ್, ಶಿವರಾಜ್, ಮಲ್ಲಿಕಾರ್ಜುನ್, ದಿಲೀಪ್, ಕೋಟೆಪ್ಪ, ಕೊಟ್ರೇಶ್ ಸೇರಿದಂತೆ ಇತರರು ನೇತೃತ್ವ ವಹಿಸಿದ್ದರು.