ದಾವಣಗೆರೆ, ಡಿ. 26- ನಗರದಲ್ಲಿ ಮಂಗಳವಾರ ದತ್ತಾತ್ರೇಯ ಜಯಂತಿ ಆಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಮಾರ್ಗಶಿರ ಮಾಸದಲ್ಲಿ ಬರುವ ಶುಕ್ಲಪಕ್ಷದ ಪೂರ್ಣಿಮೆ ಯಂದು ದತ್ತಾತ್ರೇಯ ಜಯಂತಿ ಯನ್ನು ಆಚರಿಸಲಾಗುತ್ತದೆ.
ಈ ದಿನದಂದು ಭಕ್ತರು ದತ್ತಾತ್ರೇಯನಿಗೆ ವಿವಿಧ ರೀತಿಯಲ್ಲಿ ಪೂಜೆ ಸಲ್ಲಿಸಿ, ಆಶೀರ್ವಾದವನ್ನು ಪಡೆಯುತ್ತಾರೆ. ಬೇರೆಲ್ಲಾ ದಿನಗಳಿಗೆ ಹೊರತುಪಡಿಸಿ, ಮುಖ್ಯವಾಗಿ ಈ ದಿನದಂದು ದತ್ತಾತ್ರೇಯನನ್ನು ಪೂಜಿಸಿದರೆ ಹೆಚ್ಚಿನ ಫಲ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ದತ್ತಾತ್ರೇಯ ಮಂದಿರಗಳಲ್ಲಿ ಇಂದು ವಿಶೇಷ ಹೋಮ, ಪೂಜಾದಿ ಕಾರ್ಯಗಳು ನಡೆದವು. ಶ್ರೀ ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತರು ದರ್ಶನ ಪಡೆದರು. ಜಯದೇವ ವೃತ್ತದಲ್ಲಿರುವ ಶ್ರೀ ಶಿವಾನಂದ ತೀರ್ಥಗುರು ಅಧ್ಯಾತ್ಮ ಮಂದಿರದ ಶ್ರೀ ಗುರು ದತ್ತಾತ್ರೇಯ ದೇವಾಲಯದಲ್ಲಿ ಶ್ರೀ ಗುರು ದತ್ತಾತ್ರೇಯ ಸ್ವಾಮಿ ಜಯಂತಿ ಮಹೋತ್ಸವ ಆಚರಿಸಲಾಯಿತು.
ಬೆಳಿಗ್ಗೆ 6 ಗಂಟೆಗೆ ಕಾಕಡಾರತಿ, ನಂತರ ಗಣಪತಿ, ವೀರಾಂಜನೇಯ ಸ್ವಾಮಿ ಪೂಜೆ ಹಾಗೂ ದತ್ತಾತ್ರೇಯ ಮೂರ್ತಿ ಹಾಗೂ ಗುರುಗಳ ಪಾದುಕೆಗೆ ಪೂಜೆ ಕಾರ್ಯ, ರುದ್ರಾ ಭಿಷೇಕ ನೆರವೇರಿತು. ಮಧ್ಯಾಹ್ನ ಮಹಾಮಂಗಳಾರತಿ, ಅನ್ನಸಂತ ರ್ಪಣೆ ಏರ್ಪಡಿಸಲಾಗಿ ತ್ತು. ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ರಾತ್ರಿ ಹರಿಕಥೆ ನಂತರ ತೊಟ್ಟಿಲೋತ್ಸವ ನಡೆಯಿತು. ರಾತ್ರಿ 8 ಗಂಟೆ ನಂತರ ಕಡೇ ಕಾರ್ತೀಕ ಮಹೋತ್ಸವ ಜರುಗಿತು.
ನಿಟುವಳ್ಳಿ ಶಿವ ಚಿದಂಬರ ಸಮುದಾಯ ಭವನದ ಶ್ರೀ ಶಿವ ಚಿದಂಬರ ಕ್ಷೇತ್ರದಲ್ಲಿ ಶ್ರೀ ಗುರು ದತ್ತಾತ್ರೇಯ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ 7ನೇ ವರ್ಷದ ಗುರು ದತ್ತಾತ್ರೇಯ ಸ್ವಾಮಿ ಜಯಂತಿ ಹಾಗೂ ಶ್ರೀ ಗುರು ದತ್ತಾತ್ರೇಯ ಹೋಮ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ದತ್ತಾತ್ರೇಯ ಹೋಮ, ಸನ್ಮಾನ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ನಡೆಯಿತು.