ಮುಕ್ತೇನಹಳ್ಳಿ ಗ್ರಾಮದಲ್ಲಿ 1500 ಅಡಿಕೆ ಗಿಡಗಳನ್ನು ಕತ್ತರಿಸಿರುವ ದುಷ್ಕರ್ಮಿಗಳು

ಮುಕ್ತೇನಹಳ್ಳಿ ಗ್ರಾಮದಲ್ಲಿ 1500 ಅಡಿಕೆ ಗಿಡಗಳನ್ನು ಕತ್ತರಿಸಿರುವ ದುಷ್ಕರ್ಮಿಗಳು

ಹೊನ್ನಾಳಿ, ಡಿ.26- ಮುಕ್ತೇನಹಳ್ಳಿ ಗ್ರಾಮದ ಭಾನುವಳ್ಳಿ ಪರಮೇಶ್ವರಪ್ಪ ಅವರ ಸರ್ವೇ ನಂಬರ್ 76/1ಪಿ2 ರ 2 ಎಕರೆ ವಿಸ್ತೀರ್ಣದಲ್ಲಿ ಬೆಳೆದಿದ್ದ ಸುಮಾರು 2 ವರ್ಷ ಪ್ರಾಯದ 1500 ಅಡಿಕೆ ಗಿಡಗಳನ್ನು ಯಾರೋ ದುಷ್ಕರ್ಮಿಗಳು ಭಾನುವಾರ ರಾತ್ರಿ ಕಡಿದು ಹಾಕಿರುವ ಪ್ರಕರಣ ಜರುಗಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಡಿ.ಜಿ.ಶಾಂತನಗೌಡ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ನೊಂದ ರೈತ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ಅವರಿಗೆ ಸೂಚಿಸಿದರು.

2 ವರ್ಷದ ಅಡಿಕೆ ಗಿಡಗಳನ್ನು ತುಂಬಾ ಚೆನ್ನಾಗಿ ಪೋಷಣೆ ಮಾಡಲಾಗಿತ್ತು.   ಇನ್ನು 2 ವರ್ಷದ ನಂತರ ಅಡಿಕೆ ಫಸಲು ಕೊಡುತ್ತಿತ್ತು. ಇದರಿಂದ ಲಕ್ಷಾಂತರ ರೂ.ನಷ್ಟು ಹಾನಿಯಾಗಿದೆ ಎಂದು ಪರಮೇಶ್ವರಪ್ಪ ಅವರು ಪತ್ರಕರ್ತರ ಮುಂದೆ ತಮ್ಮ ಅಳಲು ತೋಡಿಕೊಂಡರು.

ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ಅವರು ಶ್ವಾನದಳದ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

error: Content is protected !!