ನಾವು ಭಾರತೀಯರು

ಪ್ರಾಂತ್ಯ, ಭಾಷೆ, ವೇಷಗಳು ಹಲವಿದ್ದರೇನು
ಪ್ರೀತಿ ಸ್ನೇಹ ಸಹಬಾಳ್ವೆಯ ನೆಲವೊಂದೇ
ಜಾತಿ ಮತ ಧರ್ಮಗಳು ಹಲವಿದ್ದರೇನು
ಜಾತ್ಯತೀತ ಮನೋಭಾವದೊಲವೊಂದೇ.

ಭಾರತೀಯರ ಒಗ್ಗಟ್ಟಿನ ಜೇನುಗೂಡಿಗೆ
ಪರಕೀಯರ ವಕ್ರದೃಷ್ಟಿಯ ಕಲ್ಲು ಬಿದ್ದಿತು
ಬ್ರೀಟಿಷರ ಹೊಡೆದಾಳುವ ಕುತಂತ್ರ ನೀತಿಗೆ
ಭಾರತೀಯರ ಐಕ್ಯತೆಯು ಚೂರಾಯಿತು.

ಪ್ಲಾಸಿ ಕದನದ ತರುವಾಯ ಭಾರತ ದೇಶ
ಪರಂಗಿಗಳ ದಾಸ್ಯ ಸಂಕೋಲೆಗೆ ಸಿಲುಕಿತು
ಚೆನ್ನಮ್ಮ, ಲಕ್ಷ್ಮೀ, ತಾತ್ಯಾ, ಪಾಂಡೆಯರೆಲ್ಲ
ಹೋರಾಟ ಸ್ವಾತಂತ್ರ್ಯ ಕಹಳೆ ಮೊಳಗಿಸಿತು.

ರಾನಡೆ, ನವರೋಜಿ, ಬ್ಯಾನರ್ಜಿ, ಗೋಖಲೆಯರ
ಪ್ರಾರ್ಥನೆ, ಬಿನ್ನಹ, ಪ್ರತಿಭಟನೆ ನೀತಿ ತಂತ್ರ
ಲಾಲ್, ಪಾಲ್, ಬಾಲರ ಸ್ವರಾಜ್ಯ ನಮ್ಮ ಆಜನ್ಮ
ಸಿದ್ಧ ಹಕ್ಕೆಂಬ ದೇಶಾಭಿಮಾನದ ತಾರಕ ಮಂತ್ರ.

ಭಗತ್, ಅಜಾದ್, ಸುಭಾಷ್, ಪಟೇಲ್, ಸಾವರ್ಕರ್
ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಫಲವು
ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನದಿಂದಲೇ
ಭಾರತಾಂಬೆಯ ಮಕ್ಕಳಿಗೆ ದೊರಕಿತು ಸ್ವಾತಂತ್ರ್ಯವು.

ನಡುರಾತ್ರಿ ದೊರೆತ ಸ್ವಾತಂತ್ರ್ಯವ ನಡುಬೀದಿಗೆ ತರದೆ
ಭಾರತಾಂಬೆಯ ಮಡಿಲಲ್ಲಿ ಕೂಡಿಕೊಂಡು ಬಾಳುವ
ರಾಷ್ಟ್ರ ಸಂವಿಧಾನದ ಆಶೋತ್ತರಗಳ ಚಾಚು ತಪ್ಪದೆ
ಪಾಲಿಸಿಕೊಂಡು ನಾವು ಭಾರತೀಯರೆಲ್ಲ ಒಂದೆನ್ನುವ.


ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
9740050150
[email protected]

error: Content is protected !!